ಶಿಕ್ಷಕಿಯ ಚಿನ್ನದ ಚೈನ್ ಕಿತ್ತು ಪರಾರಿ

ಕಲಬುರಗಿ:ಜು.09: ಸ್ಕೂಟಿ ಮೇಲೆ ಹೋಗುತ್ತಿದ್ದ ಶಿಕ್ಷಕಿಯೊಬ್ಬರ ಕೊರಳಲ್ಲಿನ ಸುಮಾರು 75000ರೂ.ಗಳ ಮೌಲ್ಯದ 7.5 ಗ್ರಾಮ್ ತೂಕದ ಬಂಗಾರದ ಚೈನನ್ನು ಹಿಂಬದಿಯಿಂದ ಬಂದ ಇಬ್ಬರು ದ್ವಿಚಕ್ರವಾಹನ ಸವಾರರು ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ಜೇವರ್ಗಿ ರಸ್ತೆಯ ಹೊರಸೇತುವೆಯ ಬಳಿ ಸೋಮವಾರ ರಾತ್ರಿ 9-10 ಗಂಟೆಗೆ ವರದಿಯಾಗಿದೆ.
ವಿವೇಕಾನಂದ ವಿದ್ಯಾನಿಕೇತನ ಶಾಲಾ ಶಿಕ್ಷಕಿ ಹಾಗೂ ಓಜಾ ಲೇಔಟ್‍ನ ಶ್ರೀಗುರು ಕಾಲೇಜು ಹತ್ತಿರದ ನಿವಾಸಿ ಕು. ಸುಮಾ ತಂದೆ ಸಿದ್ದಪ್ಪ ಭಗವತಿ ಅವರೇ ಚಿನ್ನದ ಚೈನು ಕಳೆದುಕೊಂಡಿದ್ದಾರೆ. ಸೇತುವೆಯ ಮೇಲೆ ನಿಧಾನವಾಗಿ ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರವಾಹನದ ಮೇಲೆ ಬಂದ ಇಬ್ಬರು ಸ್ಕೂಟಿ ಮೇಲೆ ಇದ್ದ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಹಿಂಬದಿ ಸವಾರನು ಚೈನು ಕಿತ್ತುಕೊಂಡಿದ್ದು, ಇಬ್ಬರೂ ದ್ವಿಚಕ್ರವಾಹನದಲ್ಲಿಯೇ ಪರಾರಿಯಾದರು ಎಂದು ದೂರು ಸಲ್ಲಿಸಿದ್ದು, ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.