ಮಕ್ಕಳಿಗೆ ಆತ್ಮವಿಶ್ವಾಸದ ಬದುಕು ಕಲಿಸಲು;ಡಿಸಿ ಸೂಚನೆ

ಕೋಲಾರ,ಫೆ,೯- ಮಕ್ಕಳಿಗೆ ಶಿಕ್ಷಣದೊಂದಿಗೆ ಆತ್ಮವಿಶ್ವಾಸ,ಧೈರ್ಯ ತುಂಬುವಲ್ಲಿ ವಿಫಲರಾಗಿದ್ದೇವೆ, ಸಣ್ಣ ಸಣ್ಣ ವಿಫಲತೆಗೂ ಆತ್ಯಹತ್ಯೆಯತ್ತ ಮುಖಮಾಡುವ ಮನಸ್ಥಿತಿ ಕಾಣುತ್ತಿದ್ದೇವೆ, ಓದಿನ ಜತೆಗೆ ಅವರಿಗೆ ಬದುಕುವುದನ್ನು ಕಲಿಸಬೇಕು, ಸೌಲಭ್ಯಗಳನ್ನು ಬಳಸಿಕೊಂಡು ಸಮಾಜ,ಸಮುದಾಯದ ಆಸ್ತಿಯಾಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರೆ ನೀಡಿದರು.


ಭಾನುವಾರ ನಗರದ ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿನ ಜ್ಯೋತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ಗಾಣಿಗ ಮತ್ತು ಇತರೆ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಜ್ಯೋತಿ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಕಂಫರ್ಟ್‌ಝೋನ್‌ನ್‌ನಲ್ಲಿ ಮಕ್ಕಳನ್ನು ಬೆಳೆಸುತ್ತಿರುವುದು ತಪ್ಪು, ಅವರು ಅವರಾಗಿ ಬದುಕಲು ಅವಕಾಶ ಮಾಡಿಕೊಡಬೇಕು, ವಿವೇಕಾನಂದರು, ಅಂಬೇಡ್ಕರ್ ಹೇಳಿದಂತೆ ಸಮಾಜ ಕಟ್ಟುವರು,ಮನಸ್ಸು,ಸಮುದಾಯ ಕಟ್ಟುವವರನ್ನು ಮರೆಯಬಾರದು ಎಂದು ತಿಳಿಸಿ, ಶಿಕ್ಷಣ, ಅಧಿಕಾರ,ಸಂಪತ್ತು ಬರುತ್ತೆ ಅದರೆ ಅಂತಹ ಸೌಲಭ್ಯ ನೀಡಿದ ಸಮುದಾಯವನ್ನು ಮರೆತರೆ ಅದು ಆತ್ಮವಂಚನೆಯಾಗುತ್ತದೆ ಎಂದು ಎಚ್ಚರಿಸಿದರು.


ಶಿಕ್ಷಣವಿಲ್ಲದಿದ್ದರೂ ತಾಯಂದಿರನ್ನು ಮ್ಯಾನೇಜ್‌ಮೆಂಟ್ ಎಕ್ಸ್‌ಫರ್ಟ್ ಎಂದ ಡಿಸಿಯವರು, ಸಂಸಾರದ ಸವಾಲುಗಳನ್ನು ಎದುರಿಸಿ, ಹಣಕಾಸು ನಿರ್ವಹಣೆ, ಮಕ್ಕಳ ಪಾಲನೆ, ಮನೆಸಮಸ್ಯೆ ಎದುರಿಸುವ ತಾಯಿ ನಮಗೆ ಆದರ್ಶವಾಗಬೇಕು ಇಲ್ಲಿ ಜ್ಯೋತಿಶ್ರೀ ಪ್ರಶಸ್ತಿಗೆ ಮೂವರು ಮಹಿಳೆಯರೇ ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು.


ದೌರ್ಬಲ್ಯಗಳ ಅರಿವು-


ಅಧಿಕಾರಿಯಾದವರು ಸಾರ್ವಜನಿಕರೊಂದಿಗೆ ಒಡನಾಟವಿಲ್ಲದೇ ಎಸಿ ರೂಂನಲ್ಲಿ ಕುಳಿತು ಆಡಳಿತ ನಡೆಸುತ್ತೇವೆಂದರೆ ಅದು ಮಹಾದ್ರೋಹ ಮತ್ತು ಲೋಪ ಎಂದ ಅವರು, ಜನರೊಂದಿಗೆ ಭಾನುವಾರ ಸೇರಿದರೆ ನಮ್ಮ ದೌರ್ಬಲ್ಯಗಳ ಅರಿವು, ಕೆಲಸದ ಜವಾಬ್ದಾರಿ ಗೊತ್ತಾಗುತ್ತದೆ ಎಂದರು.


ವಿದ್ಯಾವಂತರಾದರೆ ಸಾಲದು ವಿಚಾರವಂತರು,ಹೃದಯವಂತರೂ ಆಗಬೇಕು, ಸಂವೇದನಾಶೀಲತೆ ಮಕ್ಕಳಲ್ಲಿ ಬೆಳೆಸಬೇಕು, ಮತ್ತೊಬ್ಬರ ಕಷ್ಟಕ್ಕೆ ಆಗುವ ಗುಣ ಇರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದ ಅವರು, ನಾವು ಹಿಂದುಳಿದವರು ಎಂಬ ಹಣೆಪಟ್ಟಿ ಎಷ್ಟುವರ್ಷ ಬೇಕು,ಇದು ಮಾನಸಿಕವಾಗಿ ಕುಗ್ಗಿಸುತ್ತದೆ, ಗ್ಲೊಬಲೈಜೇಷನ್‌ನಿಂದ ವೇಗದ ಬದಲಾವಣೆಯಾಗಿದೆ, ಪರ್ಯಾಯ ಮಾರ್ಗ ಹುಡುಕಬೇಕು,ಸ್ವಾವಲಂಬಿ ಬದುಕು ಕಟ್ಟಿಕೊಂಡು ಮತ್ತಷ್ಟು ಜನರಿಗೆ ನೆರವಾಗಬೇಕೆಂದರು.


ಗಾಣಿಗ ಅಭಿವೃದ್ದಿ ನಿಗಮ-
ಮಾಜಿ ಸಭಾಪತಿ, ಜ್ಯೋತಿ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ವಿ.ಆರ್.ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯ ತಾವು ಶಾಸಕರಾದಾಗ ಕಾರು ಖರೀದಿಗೆ ನೀಡಿದ್ದ ೧ ಲಕ್ಷ ಹಣದಿಂದ ಖರೀದಿಸಿದ ಈ ಜಾಗ ಇಂದು ಇಡೀ ಸಮುದಾಯದ ಆಸ್ತಿಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.


ಅಖಿಲ ಕರ್ನಾಟಕ ಗಾಣಿಗ ಸಂಘಕ್ಕೆ ಖರ್ಗೆಯವರು ಕಂದಾಯ ಮಂತ್ರಿಯಾಗಿದ್ದಾಗ ೧ ಎಕರೆ ಜಾಗ ಕೊಟ್ಟರು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಭವನ ನಿರ್ಮಾಣಕ್ಕೆ ೫ ಕೋಟಿ ನೀಡಿದ್ದಾರೆ, ಜತೆಗೆ ಗಾಣಿಗ ಅಭಿವೃದ್ದಿ ನಿಗಮ ಸ್ಥಾಪನೆಗೂ ಹಸಿರು ನಿಶಾನೆ ತೋರಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.


ಜಾತಿವಾರು ನಿಗಮ ಸ್ಥಾಪನೆಗೆ ತಮ್ಮ ವಿರೋಧವಿತ್ತು, ದೇವರಾಜು ಅರಸು ನಿಗಮಕ್ಕೆ ಹೆಚ್ಚು ಅನುದಾನ ನೀಡಬಹುದಿತ್ತು, ಪ್ರತ್ಯೇಕ ನಿಗಮಗಳಿಂದ ಕೆಲವು ಕಡಿಮೆ ಜನಸಂಖ್ಯೆಯ ಸಣ್ಣ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದರು.


ಜ್ಯೋತಿ ಎಜುಕೇಷನ್ ಟ್ರಸ್ಟ್ ಸಂಕುಚಿತತೆ ಬಿಟ್ಟು ಇಡೀ ಸಮಾಜದತ್ತ ಮುಖ ಮಾಡಿದೆ,ನಮ್ಮ ಸಮುದಾಯದ ಜತೆಗೆ ಇತರೆ ಸಮುದಾಯದ ಸಾಧಕರನ್ನು ಗೌರವಿಸುತ್ತಿದೆ ಎಂದರು.


ಇದೇ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಂ.ಪ್ರಸನ್ನ, ಇಲಾಖೆಯಿಂದ ಸಿಗುವ ಶೈಕ್ಷಣಿಕ ಹಾಗೂ ಇತರೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದರು.


ಸಾಧಕರಿಗೆ ‘ಜ್ಯೋತಿಶ್ರೀ’ ಗೌರವ
ಕಂದಾಯ ಇಲಾಖೆಯ ಸೀನಿಯರ್ ಅಸಿಸ್ಟೆಂಟ್ ರಿಜಿಸ್ಟ್ರಾರ್ ಸ್ವರ್ಣಲತಾ, ಚಿಕ್ಕಬಳ್ಳಾಪುರದ ಪ್ರೊ.ಬಿ.ಕೃಷ್ಣ, ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಕ್ರೀಡಾ ಪ್ರತಿಭೆ ಶಿಢ್ಲಘಟ್ಟದ ಪೂಜಾ ಪ್ರಸಾದ್, ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕೃಷಿ ಮಹಿಳೆ ಮಂಜುಳಾ ನಾಗನಾಳ ಮತ್ತು ಸ್ವಾವಲಂಬಿ ಉದ್ಯೋಗದೊಂದಿಗೆ ಸಮುದಾಯದ ಸಾಧಕರಾಗಿರುವ ಚಿಂತಾಮಣಿಯ ಧನುಷ್ ಅವರಿಗೆ ‘ಜ್ಯೋತಿಶ್ರೀ’ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರದಾನ ಮಾಡಿದರು.


ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗನಾಳ ಮಂಜುನಾಥ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ,ಉಪಾಧ್ಯಕ್ಷೆ ಭಾರತಿದೇವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ಲೆಕ್ಕಪರಿಶೋಧಕ ಎಸ್.ಕೆ.ವೆಂಕಟರಾಂ, ಸಂಘಟನಾ ಕಾರ್ಯದರ್ಶಿ ಕೆ.ರವಿ, ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿರ್ದೇಶಕರಾದ ವಿ.ಆರ್.ನಾಗರಾಜ್, ವೀರಭದ್ರಪ್ಪ, ಅರುಣ್, ಅರ್ಜುನ್,ಆನಂದ್‌ಕುಮಾರ್, ರಾಮಚಂದ್ರಪ್ಪ, ಹಾರಂಗಿ ಚಲಪತಿ, ಶಿಕ್ಷಕ ಚಲಪತಿ, ವೆಂಕಟೇಶಪ್ಪ, ಶಿವಕುಮಾರ್, ಅರುಣ್, ಅರ್ಜುನ್, ನರಸಿಂಹಪ್ಪ, ಕೃಷ್ಣಮೂರ್ತಿ,ಕೆಂಪಣ್ಣ, ಡಾ.ಶ್ರೀನಿವಾಸ್, ಕನಕಪುರದ ಗಂಗಾಧರ್, ವ್ಯವಸ್ಥಾಪಕ ಸುನೀಲ್ ಮತ್ತಿತರರಿದ್ದರು.