
ರಾಯಪುರ, ಆ.೨೫-ಹಣಕಾಸು ಸಂಕಷ್ಟದ ಸಂದರ್ಭದಲ್ಲಿ ನಿರುದ್ಯೋಗಿ ಪತಿಯನ್ನು ಅಣಕಿಸುವುದು ಅಥವಾ ಲೇವಡಿ ಮಾಡುವುದು ಮಾನಸಿಕ ಹಿಂಸೆಯಾಗಿ ಪರಿಗಣಿಸಲ್ಪಡುತ್ತದೆ ಎಂದು ಛತ್ತೀಸ್‌ಘಡ ಹೈಕೋರ್ಟ್ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಪತಿ ಮತ್ತು ಮಗನನ್ನು ಯಾವುದೇ ಕಾರಣವಿಲ್ಲದೇ ಬಿಟ್ಟುಹೋದ, ಹಣಕಾಸು ಸಂಕಷ್ಟದ ಸಂದರ್ಭದಲ್ಲಿ ಪರಿಯನ್ನು ಅಣಕಿಸಿದ ಮತ್ತು ವಿಚಾರಣೆಗಳಿಗೆ ಹಾಜರಾಗದ ಪತ್ನಿಯ ನಡತೆ ಹಿಂದೂ ವಿವಾಹ ಕಾಯ್ದೆ-೧೯೫೫ರ ಅಡಿಯಲ್ಲಿ ಹಿಂಸೆ ಮತ್ತು ಪರಿತ್ಯಾಗ ಎಂದು ಪರಿಗಣಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈ ದಂಪತಿ ೧೯೯೬ರ ಡಿಸೆಂಬರ್ ೨೬ರಂದು ಭಿಲಾಯಿಯಲ್ಲಿ ವಿವಾಹಬಂಧನಕ್ಕೆ ಒಳಗಾಗಿದ್ದರು. ಇವರಿಗೆ ೧೯ ವರ್ಷದ ಪುತ್ರಿ ಮತ್ತು ೧೬ ವರ್ಷದ ಪುತ್ರ ಇದ್ದಾರೆ. ಪತ್ನಿ ಪಿಎಚ್‌ಡಿ ಪದವಿ ಪಡೆಯಲು ಪತಿ ನೆರವಾಗಿರುವುದು ಮತ್ತು ಶಾಲೆಯೊಂದರ ಪ್ರಾಂಶುಪಾಲೆ ಹುದ್ದೆ ಪಡೆಯಲು ನೆರವಾಗಿರುವುದನ್ನು ನ್ಯಾಯಾಲಯದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಕೋವಿಡ್-೧೯ ಸಾಂಕ್ರಾಮಿಕದ ಸಂದರ್ಭದಲ್ಲಿ ನ್ಯಾಯಾಲಯಗಳು ಮುಚ್ಚಲ್ಪಟ್ಟು, ವಕೀಲ ಪತಿಗೆ ಆದಾಯ ಇಲ್ಲದ ಸಂದರ್ಭದಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಗಂಡನನ್ನು ಲೇವಡಿ ಮಾಡುತ್ತಿದ್ದಳು ಎಂದು ಪತಿಯ ಪರ ವಕೀಲರು ವಾದ ಮಂಡಿಸಿದ್ದರು.
೨೦೨೦ರ ಆಗಸ್ಟ್‌ನಲ್ಲಿ ಜಗಳವಾಡಿ ಪುತ್ರಿಯ ಜತೆ ಮನೆ ತೊರೆದಿದ್ದಳು. ಪತಿ ಹಾಗೂ ಮಗ ಆಕೆಯನ್ನು ಕರೆತರುವ ಪ್ರಯತ್ನ ಮಾಡಿದ್ದರೂ ಸಫಲವಾಗಿರಲಿಲ್ಲ. ೨೦೨೦ರ ಸೆಪ್ಟೆಂಬರ್ ೧೬ರಿಂದ ಪ್ರತ್ಯೇಕ ವಾಸವಿದ್ದ ಇವರ ವಿವಾಹಸಂಬಂಧ ಮುರಿದು ಬಿದ್ದಿತ್ತು.
ನ್ಯಾಯಸಮ್ಮತವಾದ ಅಥವಾ ಸಕಾರಣವಿಲ್ಲದೇ ಪತಿಯನ್ನು ಬಿಟ್ಟುಹೋಗಿದ್ದಾಗಿ ಪರಿಗಣಿಸಿದ ಹೈಕೋರ್ಟ್, ವಿಚಾರಣೆಗೆ ಗೈರುಹಾಜರಾಗಿರುವುದನ್ನು ಕೂಡಾ ವಿವಾಹ ಸಂಬಂಧವನ್ನು ಮುರಿದುಕೊಳ್ಳುವ ಉದ್ದೇಶ ಎಂದು ಪರಿಗಣಿಸಿದೆ.
ಈ ವಿವಾಹ ಸಂಬಂಧವನ್ನು ರದ್ದುಪಡಿಸಿದ ಹೈಕೋರ್ಟ್, “ಮೌಖಿಕವಾಗಿ ಬೈಯ್ಯುವುದು ಮತ್ತು ಸಕಾರಣವಿಲ್ಲದ ಬೇಡಿಕೆಗಳನ್ನು ಮುಂದಿಡುವುದು ಕೂಡಾ ಹಿಂಸೆ ಎಂದು ಪರಿಗಣಿಸಲ್ಪಡುತ್ತದೆ ಮತ್ತು ವಿಚ್ಛೇದನಕ್ಕೆ ಸಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದೆ.