
ಧಾರವಾಡ, ಫೆ.22: ಪ್ರಸಕ್ತ ಸಾಲಿನ ಮಾರ್ಚದಿಂದ ಮೇ ತಿಂಗಳವರೆಗೆ ಬೇಸಿಗೆ ಹೆಚ್ಚಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆಯು ಈಗಾಗಲೇ ನೀಡಿರುವದರಿಂದ ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿ, ಅಗತ್ಯ ದಾಸ್ತಾನು ಮತ್ತು ಪರಿಹಾರ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ 2026 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಜನ ಜಾನುವಾರಗಳಿಗೆ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಅತಿಯಾದ ಬಿಸಿಲಿನಿಂದ ಕೈಗೊಳ್ಳುವ ಮುನ್ನಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ವರದಿಯ ಪ್ರಕಾರ ಮುಂಬರುವ ಮಾರ್ಚ, ಏಪ್ರೀಲ್, ಮೇ ತಿಂಗಳುಗಳಲ್ಲಿ ಅಳ್ನಾವರ ತಾಲೂಕಿನ 4, ಧಾರವಾಡ ತಾಲೂಕಿನ 30, ಹುಬ್ಬಳ್ಳಿ ತಾಲೂಕಿನ 19, ಕುಂದಗೋಳ ತಾಲೂಕಿನ 9, ಕಲಘಟಗಿ ತಾಲೂಕಿನ 16, ನವಲಗುಂದ ತಾಲೂಕಿನ 7 ಮತ್ತು ಅಣ್ಣಿಗೇರಿ ತಾಲೂಕಿನ 5 ಗ್ರಾಮಗಳು ಸೇರಿ ಒಟ್ಟು 90 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಅಂದಾಜಿಸಿದ್ದಾರೆ. ಮತ್ತು ಈ 90 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು 186 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅವುಗಳ ಮಾಲೀಕರಿಂದ ಬೋರವೆಲ್ ಬಾಡಿಗೆ ಪಡೆಯಲು ಒಪ್ಪಿಗೆ ಪತ್ರ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈಗಾಗಲೇ ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಮನಗುಂಡಿ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮಗಳಿಗೆ ಬಾಡಿಗೆ ಬೋರವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ ಮತ್ತು ಅಳ್ನಾವರ, ಕಲಘಟಗಿ, ಕುಂದಗೋಳ ಪಟ್ಟಣ ಪಂಚಾಯತಿಗಳು ಸೇರಿ 5 ನಗರ ಸ್ಥಳೀಯ ಸಂಸ್ಥೆಗಳಿದ್ದು, ಇವುಗಳಲ್ಲಿ 100 ವಾರ್ಡಗಳಿವೆ. ಈ ಪೈಕಿ 60 ವಾರ್ಡಗಳಿಗೆ ಪ್ರತಿ ದಿನ, 4 ವಾರ್ಡಗಳಿಗೆ ಎರಡು ದಿನಕೊಮ್ಮೆ, 17 ವಾರ್ಡಗಳಿಗೆ ನಾಲ್ಕು ದಿನಕೊಮ್ಮೆ ಮತ್ತು 19 ವಾರ್ಡಗಳಿಗೆ ವಾರಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತು ನೀರಿನ ಅಪವ್ಯಯ ತಪ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಅಗತ್ಯ ಇರುವ ಮೇವು ದಾಸ್ತಾನು ಹೊಂದಲಾಗಿದೆ. ಬೇಸಿಗೆ ಅವಧಿಯಲ್ಲಿ ಸರಬರಾಜು ಮಾಡಲು ಮುಂದಿನ 28 ವಾರಗಳಿಗೆ ಅಗತ್ಯವಿರುವಷ್ಟು ಮೇವನ್ನು ಜಿಲ್ಲೆಯಲ್ಲಿ ದಾಸ್ತಾನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಬಿಸಿಗಾಳಿ ಹೆಚ್ಚಾಗಿರಲಿದೆ. ವಿಶೇಷವಾಗಿ ಏಪ್ರೀಲ್, ಮೇ ತಿಂಗಳಿನಲ್ಲಿ ಉಷ್ಣಾಂಶವು 35 ರಿಂದ 40 ಡಿಗ್ರಿ ಸೆಲ್ಸಿಯಸ್ ಇರುವ ಬಗ್ಗೆ ವರದಿ ಇದೆ. ಈ ಕುರಿತು ನಗರ ಮತ್ತು ಗ್ರಾಮಗಳಲ್ಲಿ ಐಇಸಿ ಕಾರ್ಯ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಹೇಳಿದರು.
ಬೇಸಿಗೆ ಅವಧಿಯಲ್ಲಿ ಸಾರ್ವಜನಿಕರು ಬಿಸಿ ಗಾಳಿಯಿಂದ ಸುರಕ್ಷಿತವಾಗಿ ಇರುವಂತೆ ಮತ್ತು ಯಾವುದೇ ರೀತಿ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಯು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಮಾತನಾಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಪಶು ಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ.ಸಂತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ತಹಶೀಲ್ದಾರರಾದ ಡಾ. ಡಿ.ಎಚ್.ಹೂಗಾರ, ಮಹೇಶ ಗಸ್ತಿ, ಜಿ.ಬಿ.ಮಜ್ಜಗಿ, ಸುಧೀರ ಸಾವುಕಾರ, ಬಸವರಾಜ ಹೊಂಕಣನವರ, ಎಮ್.ಜಿ.ದಾಸಪ್ಪನವರ, ರಾಜು ಮಾವರಕರ್ ಮಾತನಾಡಿ, ಬೇಸಿಗೆ ಅವಧಿಯ ಸುರಕ್ಷತಾ ಕ್ರಮಗಳ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ವೆಂಕಟೇಶ ಗುಳ್ಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಎಲ್ಲ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.



























