
ಕಲಬುರಗಿ,ಫೆ.20-ರೌಡಿಶೀಟರ್ ಮೊಹ್ಮದ್ ರುಸ್ತುಂ ಅಹ್ಮದ್ ಅಲಿಯಾಸ್ ರುಸ್ತುಂನನ್ನು ಕಲಬುರಗಿ ನಗರದಿಂದ ಗಡಿಪಾರು ಮಾಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ರೌಡಿಶೀಟರ್ ಮೊಹ್ಮದ್ ರುಸ್ತುಂ ಅಹ್ಮದ್‍ನ ಸಮಾಜ ವಿದ್ರೋಹಿ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಕರ್ನಾಟಕ ಅಕ್ರಮ ಮದ್ಯ ವ್ಯವಹಾರಗಾರರು, ಔಷಧಪರಾಧ ಮಾರಾಟಗಾರರು, ಜೂಜುಕೋರರು, ಗೂಂಡಾಗಳು, ಅನೈತಿಕ ವ್ಯವಹಾರಗಾರರ, ಕೊಳಚೆ ಪ್ರದೇಶ ಅತಿಕ್ರಮಿಸುವವರ ಹಾಗೂ ಆಡಿಯೋ ವಿಡಿಯೋ ಕೃತಿಚೌರ್ಯಗಾರರ, ಅಪಾಯಕಾರಿ ಚಟುವಟಿಕೆಗಳ ನಿಗ್ರಹ ಕರ್ನಾಟಕ ಕಾಯ್ದೆ-1985 ಕಲಂ 3 ಉಪ ಕಲಂ (1)ರ ಅನ್ವಯ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಲಾಗಿತ್ತು.
ಗೂಂಡಾ ಕಾಯ್ದೆಯ ಅಡಿಯಲ್ಲಿ ರಚಿತವಾದ ಹೈಕೋರ್ಟ್ ಆಫ್ ಕರ್ನಾಟಕದ ತ್ರಿಸದಸ್ಯ ಪೀಠದ ಸದಸ್ಯರು ಮತ್ತು ಮುಖ್ಯನ್ಯಾಯಾಧೀಶರಾದ ಕೆ.ಸೋಮಶೇಖರ, ಸಚಿನ್ ಎಸ್.ಮುಗ್ಧಂ ಮತ್ತು ಪ್ರದೀಪ್ ಸಿಂಗ್ ಎರೂರು ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಕೂಲಂಕುಷವಾಗಿ ವಿಚಾರಣೆ ಮಾಡಿ ಒಂದು ವರ್ಷದ ಅವಧಿಯವರೆಗೆ ಆರೋಪಿಯನ್ನು ಬಂಧನದಲ್ಲಿ ಇಡಲು ಆದೇಶ ಹೊರಡಿಸಿತ್ತು.
ಈ ಸಲಹಾ ಮಂಡಳಿಯ ಆದೇಶವನ್ನು ರದ್ದುಗೊಳಿಸಬೇಕು ಎಂದು ಮೊಹ್ಮದ್ ರುಸ್ತುಂ ಪತ್ನಿ ಶಾಜೀಯಾ ಅವರು ಕಲಬುರಗಿಯ ಹೈಕೋರ್ಟ್ ಬೆಂಚ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ, ಟಿ.ಎಮ್.ನದಾಫ್ ಅವರು ಗೂಂಡಾ ಪ್ರಕರಣವನ್ನು ಸುಧೀರ್ಘವಾಗಿ ವಿಚಾರಣೆ ಮಾಡಿ 14.8.2025 ರಂದು 68 ಪುಟಗಳ ತೀರ್ಪು ನೀಡಿ ಗೂಂಡಾ ಪ್ರಕರಣವನ್ನು (ಮೇಲ್ಮನವಿ) ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ಆಫ್ ಕರ್ನಾಟಕ ಕಲಬುರಗಿ ಬೆಂಚ್ ನೀಡಿದ ವಜಾ ಆದೇಶವನ್ನು ವಜಾಗೊಳಿಸಬೇಕೆಂದು ಶಾಜೀಯಾ ಅವರು ಸರ್ವೋಚ್ಚ ನ್ಯಾಯಾಲದಯದಲ್ಲಿ ಮನವಿ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎಂ.ಸುಂದರೇಶ ಮತ್ತು ವಿಫುಲ ಎಂ.ಪಂಚೋಲಿ ಅವರು ಗೂಂಡಾ ಪ್ರಕರಣವನ್ನು ವಿಚಾರಣೆ ಮಾಡಿ 12.2.2026 ರಂದು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

























