
ಬೆಂಗಳೂರು, ಏ. ೪- ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಹಲಸೂರು ಕೆರೆವರೆಗೆ ಅಧಿಕಾರಿಗಳೊಂದಿಗೆ ನಡಿಗೆ ಮೂಲಕ ಪರಿಶೀಲನೆ ನಡೆಸಿದ ಅವರು, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಪಾದಚಾರಿ ಮಾರ್ಗಗಳಲ್ಲಿ ತಂಡಗಳನ್ನು ನಿಯೋಜಿಸಿ ಸಮಗ್ರ ಸ್ವಚ್ಛತಾ ಕಾರ್ಯ ನಡೆಸಬೇಕು. ಧೂಳು, ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಹಾನಿಗೊಂಡ ಸ್ಲ್ಯಾಬ್‌ಗಳು ಹಾಗೂ ಕರ್ಬ್‌ಸ್ಟೋನ್‌ಗಳನ್ನು ದುರಸ್ಥಿಗೊಳಿಸಿ ಪಾದಚಾರಿಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸಲು ಆದೇಶಿಸಿದರು.
ಹಳೆ ಮದ್ರಾಸ್ ರಸ್ತೆಯ ಎಂಇಜಿ ತಡೆಗೋಡೆ ಬಳಿ ತ್ಯಾಜ್ಯ ಸುರಿಯುತ್ತಿರುವುದು ಹಾಗೂ ಅಪಾಯಕಾರಿ ಕಬ್ಬಿಣದ ತಂತಿಗಳು ಕಂಡುಬಂದ ಹಿನ್ನೆಲೆ, ಸಂಬಂಧಪಟ್ಟವರಿಗೆ ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಆಂಜನೇಯ ದೇವಸ್ಥಾನದ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದಿರುವ ನರ್ಸರಿ, ಗ್ರಾನೈಟ್ ಅಂಗಡಿ ಸೇರಿದಂತೆ ಮರ್ಪಿ ರಸ್ತೆಯಲ್ಲಿನ ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ, ಸಂಬಂಧಪಟ್ಟವರಿಗೆ ದಂಡ ವಿಧಿಸಲು ಸೂಚಿಸಿದರು. ಪಾದಚಾರಿಗಳಿಗೆ ಅಡ್ಡಿಯಾಗುವ ಮರದ ಕೊಂಬೆಗಳನ್ನು ಕೂಡ ತೆರವುಗೊಳಿಸಲು ನಿರ್ದೇಶನ ನೀಡಿದರು.
ಹಲಸೂರು ಕೆರೆ ಅಭಿವೃದ್ಧಿಗೆ ವೇಗ:
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಮಾತನಾಡಿ, ಹಲಸೂರು ಕೆರೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.
೧೦೬ ಎಕರೆ ವ್ಯಾಪ್ತಿಯ ಹಲಸೂರು ಕೆರೆಯನ್ನು ೩೩.೫೦ ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಹೂಳೆತ್ತುವುದು, ವಾಯುವಿಹಾರ ಮಾರ್ಗ, ಗ್ರಿಲ್ ಅಳವಡಿಕೆ, ಐಲ್ಯಾಂಡ್‌ಗಳ ದುರಸ್ತಿ, ಬಂಡ್ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಕೆರೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಹೊಸ ಕಲ್ಯಾಣಿ ನಿರ್ಮಾಣವೂ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾದಚಾರಿ ಮಾರ್ಗಗಳಲ್ಲಿ ಬಿದಿರು ಸಸಿಗಳ ನೆಡುವಿಕೆ
ಟ್ರಾಕ್ಟರ್‌ಗಳ ಬದಲು ಟಿಪ್ಪರ್ ಬಳಕೆ
ಮಳೆಗಾಲಕ್ಕೂ ಮುನ್ನ ಡ್ರೋನ್‌ಗಳ ಹೂಳೆತ್ತುವಿಕೆ
ಅನಧಿಕೃತ ಕಟ್ಟಡಗಳ ತೆರವು
ರಸ್ತೆ ಕುಸಿತಗಳ ತಕ್ಷಣ ದುರಸ್ತಿ
ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳಿಗೆ ದಂಡ ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ಸ್ವಚ್ಛತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
























