Home ಜಿಲ್ಲೆ ಯುದ್ಧಪೀಡಿತ ಕತಾರ್ ನಲ್ಲಿ ಸಿಲುಕಿ ಸಂಕಷ್ಟ:ಸ್ವಗ್ರಾಮಕ್ಕೆ ತರಲು ಶಾಸಕ ಬೆಲ್ದಾಳೆ ಕ್ರಮ

ಯುದ್ಧಪೀಡಿತ ಕತಾರ್ ನಲ್ಲಿ ಸಿಲುಕಿ ಸಂಕಷ್ಟ:ಸ್ವಗ್ರಾಮಕ್ಕೆ ತರಲು ಶಾಸಕ ಬೆಲ್ದಾಳೆ ಕ್ರಮ

ಬೀದರ್: ಏ.5:ಅಮೆರಿಕ-ಇಸ್ರೇಲ್ -ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಕತಾರ್ ನಲ್ಲಿ ಸಿಲುಕಿ, ತಾಯ್ನಾಡಿಗೆ ಮರಳಲು ಸಂಘರ್ಷ ನಡೆಸುತ್ತಿದ್ದ ಬೀದರ್ ದಕ್ಷಿಣ ಕ್ಷೇತ್ರದ ಬಕ್ ಚೌಡಿ ಗ್ರಾಮದ ಅಮರ್ ಭಾವಿಕಟ್ಟಿ ಅವರ ಸಮಸ್ಯೆಗೆ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಸ್ಪಂದಿಸಿದ್ದಾರೆ. ಶೀಘ್ರವೇ ಅಮರ್ ಸ್ವಗ್ರಾಮಕ್ಕೆ ಬರಲಿದ್ದು, ಕುಟುಂಬಸ್ಥರಲ್ಲಿ ಇನ್ನಿಲ್ಲದ ಸಂಭ್ರಮ ಮನೆ ಮಾಡಿದೆ.

ಕೆಲಸದ ನಿಮಿತ್ತ ಅಮರ್ ಭಾವಿಕಟ್ಟಿ ಕತಾರ್ ದೇಶಕ್ಕೆ ತೆರಳಿದ್ದರು. ಭೀಕರ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿ ಪರಿಸ್ಥಿತಿ ಸದ್ಯ ಆತಂಕಮಯವಾಗಿದೆ. ಹೀಗಾಗಿ ಅಮರ್ ಭಾವಿಕಟ್ಟಿ ಮರಳಿ ಭಾರತಕ್ಕೆ ಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರು. ಮೇಲಾಗಿ ಅವರಿಗೆ ಇಲ್ಲಿಗೆ ಬರಲು ಹಣದ ಕೊರತೆಯೂ ಎದುರಾಗಿತ್ತು. ಗ್ರಾಮದ ಮುಖಂಡರು ಹಾಗೂ ಅವರ ಪಾಲಕರು ವಿಷಯವನ್ನು ಗಮನಕ್ಕೆ ತಂದ ಬೆನ್ನಲ್ಲೇ ಶಾಸಕ ಡಾ.ಬೆಲ್ದಾಳೆ ಅವರು ಈ ಸಮಸ್ಯೆಗೆ ಸ್ಪಂದಿಸಿ, ಅಗತ್ಯ ನೆರವು ನೀಡುವ ಮೂಲಕ ತಮ್ಮ ಜನಪರ, ಮಾನವೀಯ ಕಾಳಜಿ ಮೆರೆದಿದ್ದಾರೆ.

ಅಮರ್ ಸಮಸ್ಯೆಗೆ ಸಿಲುಕಿದ
ವಿಷಯವನ್ನು ಡಾ.ಬೆಲ್ದಾಳೆ ಅವರು ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ತಿಳಿಸಿ ನೆರವು ಕೋರಿದ್ದಾರೆ. ಡಾ.ಬೆಲ್ದಾಳೆ ಅವರ ಮನವಿ ಮೇಲೆ ಮಾನ್ಯ ವಿಜಯೇಂದ್ರ ಅವರು ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಿ ತೊಂದರೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಮರ್ ಭಾವಿಕಟ್ಟಿಗೆ ಸುರಕ್ಷಿತ ದೇಶಕ್ಕೆ ಕರೆತರಲು ಅಗತ್ಯ ಕ್ರಮಗಳು ಕೈಗೊಳ್ಳುವ ಅಭಯ ನೀಡಿ ಮುಂದಿನ ಪ್ರಕ್ರಿಯೆ ಆರಂಭಿಸಿದೆ. ಬಾಗಲಕೋಟ ಚುನಾವಣೆ ಪ್ರಚಾರದಲ್ಲಿರುವ ವಿಜಯೇಂದ್ರ ಅವರು ದೂರವಾಣಿಯಲ್ಲಿ ಅಮರ್ ಜೊತೆಗೆ ಮಾತನಾಡಿ, ಶೀಘ್ರವೇ ಸುರಕ್ಷಿತ ಸ್ವಗ್ರಾಮಕ್ಕೆ ಬರುವಿರಿ ಎಂದು ಧೈರ್ಯ ತುಂಬಿದರು.

ಅಮರ್ ಬಾವಿಕಟ್ಟಿಗೆ ಹಣದ ತೀವ್ರ ಸಮಸ್ಯೆಯಾಗಿದೆ. ಇಲ್ಲಿಗೆ ಬರಲು ವಿಮಾನದ ಟಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಕೆಲಸ ಮಾಡುವ ಸಂಸ್ಥೆಯವರು ಸಹ ನೆರವಿಗೆ ಬರುತ್ತಿಲ್ಲ ಎಂದು ಅಮರ ತಾಯಿ ಶಾಂತಬಾಯಿ, ಮಗ ಆದರ್ಶ ಹಾಗೂ ಗ್ರಾಮದ ಮುಖಂಡರಾದ ಸಂತೋಷ, ವೀರೇಶ್, ಕವಿನ್ ಇತರರು ಶಾಸಕರ ಗಮನಕ್ಕೆ ತಂದರು. ಕೂಡಲೇ ಶಾಸಕರು ಟಿಕೆಟ್ ಗೆ ಅಗತ್ಯವಾದ 30 ಸಾವಿರ ರೂ. ಹಣ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.

ಶಾಸಕ ಬೆಲ್ದಾಳೆ ಅವರ ಈ ತಕ್ಷಣದ ಸ್ಪಂದನೆ, ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದಕ್ಕೆ ಅಮರ್ ಕುಟುಂಬ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದೆ. ಶಾಸಕ ಡಾ. ಬೆಲ್ದಾಳೆ ಅವರು ಸದಾ ಜನಪರ ಕಾಳಜಿ, ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಾರೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ. ನಮ್ಮ ಶಾಸಕರು- ನಮ್ಮ ಹೆಮ್ಮೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.