ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ: ಇಲ್ಲದಿದ್ದರೆ ಇನ್ನಷ್ಟು ಸುಂಕ

ಟ್ರಂಪ್ ಬೆದರಿಕೆ

ವಾಷಿಂಗ್ಟನ್,ಅ.೨೦- ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವುದಿಲ್ಲ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕಳೆದ ವಾರ ಎರಡು ಮೂರು ಬಾರಿ ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಿದರೆ ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಶೇಕಡಾ ೨೫ ರಷ್ಟು ಮಾಮೂಲಿ ಸುಂಕದ ಜೊತೆಗೆ ಹೆಚ್ಚುವರಿಯಾಗಿ ಶೇಕಡಾ ೨೫ ರಷ್ಟು ಸುಂಕವನ್ನು ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈಲ ಖರೀದಿ ಮುಂದುವರಿಸಿದರೆ ಈಗ ವಿಧಿಸುತ್ತಿರುವ ಶೇಕಡಾ ೫೦ರಷ್ಟು ಸುಂಕದ ಜೊತೆಗೆ ಇನ್ನಷ್ಟು ಸುಂಕ ವಿಧಿಸಲಾಗುತ್ತಿದೆ ಎಚ್ಚರದಿಂದ ಇರಿ ಎನ್ನುವ ಸಂದೇಶವನ್ನು ಭಾರತಕ್ಕೆ ರವಾನಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಭಾರತ, ತೈಲ ಖರೀದಿ ಮಾಡುವುದರಿಂದ ಹಿಂದೆ ಸರಿಯಬೇಕು ಇಲ್ಲದಿದ್ದರೆ ಭವಿಷ್ಯದಲ್ಲಿ ಅತಿ ಹೆಚ್ಚಿನ ಸುಂಕ ವಿಧಿಸಬೇಕಾಗುತ್ತದೆ ಎಂದು ಹೇಳಿದರು.

ಅಮೆರಿಕಾದ ಎಚ್ಚರಿಕೆ ನಡುವೆಯೂ ಭಾರತ, ರಷ್ಯಾದಿಂದ ತೈಲ ಖರೀದಿ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಸಜ್ಜಾಗಬೇಕಾಗುತ್ತದೆ, ಈಗಾಗಲೇ ಭಾರತದಿಂದ ಅಮೇರಿಕಾಕ್ಕೆ ಬರುವ ಉತ್ಪನ್ನಗಳ ಮೇಲೆ ಶೇಕಡಾ ೫೦ ರಷ್ಟು ಸುಂಕ ವಿಧಿಸಲಾಗಿದೆ. ಭಾರತ ತನ್ನ ಕ್ರಮ ಸಮರ್ಥಿಸಿಕೊಂಡರೆ ಮತ್ತಷ್ಟು ಸುಂಕ ವಿಧಿಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಭಾರತ ಶೀಘ್ರದಲ್ಲೇ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚಿರಿಸುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾದ ಮಾತು ಧಿಕ್ಕರಿಸಿ ತೈಲ ಖರೀದಿ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ರಷ್ಯಾದಿಂದ ತೈಲ ಖರೀದಿ ಮಾಡಿದರೆ ಭಾರತದ ವಿರುದ್ದ ಅನಿವಾರ್ಯವಾಗಿ ಹೆಚ್ಚುವರಿ ಸುಂಕ ವಿಧಿಸಬೇಕಾಗುತ್ತದೆ ಎಂದಿದ್ದಾರೆ.

ರಷ್ಯಾದಿಂದ ಭಾರತ ತೈಲ ಖರೀದಿ ಮತ್ತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭರವಸೆಯ ಬಗ್ಗೆ ಡೊನಾಲ್ಡ್ ಟ್ರಂಪ್ ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದು ಮೂರನೇ ಬಾರಿಯಾಗಿದೆ, ಮುಂದಿನ ದಿನಗಳಲ್ಲಿ ಸುಂಕದ ವಿಷಯ ಯಾವ ಹಂತಕ್ಕೆ ಹೋಗಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲದ ಸಂಗತಿ.