
ವಾಷಿಂಗ್ಟನ್, ಫೆ. ೨೧- ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳಿಂದ ಆಗಮಿಸುವ ಆಮದು ವಸ್ತುಗಳ ಮೇಲೆ ೧೦ ಶೇಕಡಾ ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಫೆಬ್ರವರಿ ೨೪ರಿಂದ (ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ ೧೦.೩೧ರಿಂದ) ಈ ಹೊಸ ಸುಂಕ ಜಾರಿಗೆ ಬರಲಿದೆ.
ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IಇಇPಂ) ಅಡಿಯಲ್ಲಿ ವಿಧಿಸಿದ್ದ ಹಿಂದಿನ ಸುಂಕ ಕ್ರಮವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ೬-೩ ತೀರ್ಪಿನ ಮೂಲಕ ಅಮಾನ್ಯಗೊಳಿಸಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ಹೊಸ ಆದೇಶಕ್ಕೆ ಸಹಿ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, “ಇದು ನಿರಾಶಾಜನಕ ತೀರ್ಪು” ಎಂದು ಹೇಳಿದ್ದಾರೆ.
ಸೆಕ್ಷನ್ ೧೨೨ ಅಡಿಯಲ್ಲಿ ಹೊಸ ಸುಂಕ
ವ್ಯಾಪಾರ ಕಾಯ್ದೆ ೧೯೭೪ರ ಸೆಕ್ಷನ್ ೧೨೨ ಅಡಿಯಲ್ಲಿ ೧೦% ಜಾಗತಿಕ ಸುಂಕವನ್ನು ವಿಧಿಸಲಾಗಿದೆ. ಈ ಸುಂಕ ಗರಿಷ್ಠ ೧೫೦ ದಿನಗಳವರೆಗೆ (ಸುಮಾರು ಐದು ತಿಂಗಳು) ಜಾರಿಯಲ್ಲಿರಬಹುದು. ಈ ಅವಧಿಯಲ್ಲಿ ಇತರೆ ದೇಶಗಳ ವಿರುದ್ಧ ನ್ಯಾಯಸಮ್ಮತ ಮತ್ತು ಪರಸ್ಪರ ವಾಣಿಜ್ಯ ನೀತಿಗಳನ್ನು ರೂಪಿಸಲು ಅಗತ್ಯ ತನಿಖೆಗಳನ್ನು ಕೈಗೊಳ್ಳಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.‘ನಾನು ಇನ್ನಷ್ಟು ಸುಂಕ ವಿಧಿಸಲು ಕೂಡ ಅಧಿಕಾರ ಹೊಂದಿದ್ದೇನೆ,” ಎಂದು ಟ್ರಂಪ್ ಹೇಳಿದ್ದಾರೆ.
ಕೆಲವು ದೇಶಗಳು ಅಮೆರಿಕವನ್ನು ವರ್ಷಗಳ ಕಾಲ ಅನ್ಯಾಯವಾಗಿ ವರ್ತಿಸಿಕೊಂಡಿವೆ. ಅಂತಹ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯನ್ನೂ ಅವರು ಸೂಚಿಸಿದ್ದಾರೆ.
ಅನ್ಯಾಯ ವಾಣಿಜ್ಯ ಪ್ರಕ್ರಿಯೆಗಳ ವಿರುದ್ಧ ಸೆಕ್ಷನ್ ೩೦೧ ಅಡಿಯಲ್ಲಿ ತನಿಖೆಗಳನ್ನು ಆರಂಭಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಅಗತ್ಯವಿದ್ದಲ್ಲಿ ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಸೆಕ್ಷನ್ ೨೩೨ ಅಡಿಯಲ್ಲಿ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯೂ ಇದೆ. ಅಮೆರಿಕ ವಾಣಿಜ್ಯ ಪ್ರತಿನಿಧಿ ಹೊಸ ೩೦೧ ತನಿಖೆಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ವೇತ ಭವನ ಬಿಡುಗಡೆ ಮಾಡಿದ ಮಾಹಿತಿ ಪತ್ರದಲ್ಲಿ, ಇಂಧನ, ಔಷಧಿ, ವಾಹನ ಮತ್ತು ಏರೋಸ್ಪೇಸ್ ಕ್ಷೇತ್ರದ ಕೆಲವು ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಪ್ರಮುಖ ಖನಿಜಗಳು, ಬಂಗಾರ ಮತ್ತು ಕರೆನ್ಸಿ ಲೋಹಗಳು, ಇಂಧನ ಸಂಬಂಧಿತ ಉತ್ಪನ್ನಗಳಿಗೆ ತಾತ್ಕಾಲಿಕ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಕಡಿಮೆ ಮೌಲ್ಯದ ಅಂತರಾಷ್ಟ್ರೀಯ ಪೋಸ್ಟಲ್ ಸರಕುಗಳಿಗೆ ನೀಡಿದ್ದ ಡ್ಯೂಟಿ ಫ್ರೀ ಸೌಲಭ್ಯವನ್ನು ಕೂಡ ಅಮಾನತು ಮಾಡಿ, ಅವುಗಳಿಗೂ ಸೆಕ್ಷನ್ ೧೨೨ ಅಡಿಯಲ್ಲಿ ಸುಂಕ ವಿಧಿಸುವಂತೆ ಮತ್ತೊಂದು ಆದೇಶ ಹೊರಡಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ಕಳೆದ ಒಂದು ವರ್ಷದಲ್ಲಿ ಸಂಗ್ರಹಿಸಿದ್ದ ಸುಮಾರು ೧೭೫ ಬಿಲಿಯನ್ ಡಾಲರ್‌ಗಳ ಸುಂಕ ಆದಾಯದ ಮರುಪಾವತಿ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ನ್ಯಾಯಾಂಗ ಪ್ರಕ್ರಿಯೆ ನಡೆಯಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ “ಮರುಪಾವತಿ ವಿಷಯವು ವಾರಗಳು, ತಿಂಗಳುಗಳು ಅಥವಾ ವರ್ಷಗಳವರೆಗೆ ಮುಂದುವರಿಯಬಹುದು” ಎಂದು ಹೇಳಿದ್ದಾರೆ. ಆದರೆ ಹೊಸ ಸುಂಕ ಕ್ರಮಗಳಿಂದ ೨೦೨೬ರಲ್ಲಿಯೂ ಸುಂಕ ಆದಾಯದಲ್ಲಿ ದೊಡ್ಡ ಮಟ್ಟದ ಕುಸಿತವಾಗುವುದಿಲ್ಲ ಎಂದು ಖಜಾನೆ ಅಂದಾಜಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿಯೂ ಟ್ರಂಪ್ ಆಡಳಿತವು ಸುಂಕಗಳನ್ನು ತನ್ನ ವಾಣಿಜ್ಯ ನೀತಿಯ ಪ್ರಮುಖ ಸಾಧನವಾಗಿ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ. ಹೊಸ ಕಾನೂನು ಕ್ರಮಗಳ ಮೂಲಕ ಸುಂಕ ಆದಾಯವನ್ನು ಸ್ಥಿರವಾಗಿಡಲು ಆಡಳಿತ ಸಂಕಲ್ಪಬದ್ಧವಾಗಿದೆ.
ಇದು ತಾತ್ಕಾಲಿಕ ಎಂದ ಶ್ವೇತಭವನ
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಭಾರತ ಸೇರಿ ಇತರೆ ದೇಶಗಳ ಮೇಲೆ ಶೆ.೧೦ ರಷ್ಟು ಸುಂಕ ವಿಧಿಸಿ ಟ್ರಂಪ್ ಆದೇಶಿಸಿದ್ದಾರೆ. ಈ ಹಿಂದೆ ವಿಧಿಸಿದ್ದ ಸುಂಕ ಕ್ರಮಗಳನ್ನು ರದ್ದುಗೊಳಿಸಿ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ಜಾಗತಿಕ ಸುಂಕ ಆದೇಶವನ್ನು ಘೋಷಿಸಿದ್ದಾರೆ. ಭಾರತ ಸೇರಿದಂತೆ ಅಮೆರಿಕ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಇತರೆ ದೇಶಗಳ ಮೇಲೆ ತಾತ್ಕಾಲಿಕವಾಗಿ ಶೇ ೧೦ರಷ್ಟು ಸುಂಕವನ್ನು ವಿಧಿಸಿ ಆದೇಶಿಸಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಈ ಸುಂಕವೂ ತಾತ್ಕಾಲಿಕವಾಗಿದೆ. ಹೆಚ್ಚು ಸೂಕ್ತವಾದ ಅಥವಾ ಪೂರ್ವ ಮಾತುಕತೆಯ ಸುಂಕ ದರಗಳನ್ನು ಜಾರಿಗೆ ತರಲು ಇತರ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಿದೆ” ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ಭಾರತ ಮತ್ತು ಅಮೆರಿಕದ ನಡುವೆ ಸಾಗಿರುವ ವ್ಯಾಪಾರ ಒಪ್ಪಂದ ಅಂತಿಮ ಚೌಕಟ್ಟು ತಲುಪಿದ ಬೆನ್ನಲ್ಲೇ ಈ ತಿಂಗಳ ಆರಂಭದಲ್ಲಿ ಟ್ರಂಪ್ ಭಾರತದ ಮೇಲೆ ವಿಧಿಸಿದ್ದ ಶೇ ೨೫ರಷ್ಟು ಸುಂಕವನ್ನು ಶೇ ೧೮ಕ್ಕೆ ಇಳಿಸಿದ್ದರು.
ಇದೀಗ ಹೊಸ ಸುಂಕದಿಂದಾಗಿ ಭಾರತದ ಮೇಲೆ ವಿಧಿಸಿದ್ದ ಶೇ ೧೮ರಷ್ಟು ಸುಂಕ ಶೇ ೧೦ಕ್ಕೆ ಬರಲಿದೆ. ಈ ಕುರಿತು ಪ್ರಶ್ನೆಗೆ ಉತ್ತರಿಸಿರುವ ಶ್ವೇತ ಭವನ ಅಧಿಕಾರಿಗಳು, ತಾತ್ಕಾಲಿಕವಾಗಿ, ಹೌದು. ಹೆಚ್ಚು ಸೂಕ್ತವಾದ ಸುಂಕ ದರವನ್ನು ಜಾರಿಗೆ ತರಲು ಮತ್ತೊಂದು ಸುಂಕ ಪ್ರಾಧಿಕಾರವನ್ನು ಆಹ್ವಾನಿಸುವವರೆಗೆ ಶೇ ೧೦ರಷ್ಟು ಸುಂಕ ಮುಂದುವರೆಯಲಿದೆ ಎಂದರು.
ಈ ನಡುವೆ ಎಲ್ಲಾ ವ್ಯಾಪಾರ ಪಾಲುದಾರರು ವ್ಯಾಪಾರ ಒಪ್ಪಂದಗಳನ್ನು ಪಾಲಿಸಬೇಕೆಂದು ಅಧಿಕಾರಿ ಕರೆ ನೀಡಿದರು. ಹೊಸ ಶೇ೧೦ರಷ್ಟು ಜಾಗತಿಕ ಸುಂಕವು ಟ್ರಂಪ್ ಅವರ ರಕ್ಷಣಾತ್ಮಕ ವ್ಯಾಪಾರ ಕಾರ್ಯಸೂಚಿಯ ಭಾಗವಾಗಿದ್ದು, ಪಾವತಿ ಅಸಮತೋಲನ ಮತ್ತು ಅನ್ಯಾಯದ ವ್ಯಾಪಾರವನ್ನು ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಸೆಕ್ಷನ್ ೧೨೨ರ ಅಡಿಯಲ್ಲಿ ಹೊಸದಾಗಿ ಘೋಷಿಸಲಾದ ಶೇಕಡಾ ೧೦ ರಷ್ಟು ಜಾಗತಿಕ ಸುಂಕವು ಭಾರತದ ಮೇಲೆ ಈ ಹಿಂದೆ ವಿಧಿಸಲಾದ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ಸುಂಕಗಳಿಗೆ ಹೆಚ್ಚುವರಿಯಾಗಿಲ್ಲ, ಆದರೆ ಇದೀಗ ಅವುಗಳನ್ನು ಬದಲಾಯಿಸುತ್ತದೆ ಎಂದು ಶ್ವೇತ ಭವನ ಅಧಿಕಾರಿಗಳು ತಿಳಿಸಿದ್ದಾರೆ.



























