
ಚಿಕ್ಕಮಗಳೂರು, ಫೆ.೨೩-ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಪ್ರಕರಣವನ್ನು ಖಂಡಿಸಿ ಕಾಫಿನಾಡಲ್ಲಿ ಜನಾಕ್ರೋಶ ತೀವ್ರಗೊಂಡಿದೆ. ನಿನ್ನೆ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಇಂದು ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್ ಮಾಡಲಾಗಿದೆ. ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.
ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಶೃಂಗೇರಿ ಕ್ಷೇತ್ರದ ಶೃಂಗೇರಿ, ಎನ್.ಆರ್. ಪುರ, ಕೊಪ್ಪ ತಾಲೂಕು, ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗಿದೆ.
ಜನರ ಆಕ್ರೋಶದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿದೆ. ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ೨ ಡಿಎಆರ್ ತುಕುಡಿಗಳನ್ನ ಪೊಲೀಸ್ ಇಲಾಖೆ ನಿಯೋಜನೆ ಮಾಡಿದೆ. ಅರಣ್ಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಬಾಳೆಹೊನ್ನೂರಿನ ಲಯನ್ಸ್ ಕ್ಲಬ್ ಸರ್ಕರ್ಲ್‌ನಲ್ಲಿ ಹೋರಾಟಗಾರರು ಜಮಾವಣೆಗೊಂಡಿದ್ದಾರೆ. ಮಾಜಿ ಸಚಿವ ಜೀವರಾಜ್, ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಲೆನಾಡು ಹಿತರಕ್ಷಣಾ ವೇದಿಕೆ ಬಂದ್‌ಗೆ ಕರೆ ನೀಡಿತ್ತು.



























