ಸರ್ಕಾರಿ ಕಾರ್‍ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಗಾಯನ ಕಡ್ಡಾಯ

ನವದೆಹಲಿ,ಫೆ.೧೧- ವಂದೇ ಮಾತರಂ ರಾಷ್ಡ್ರೀಯ ಗೀತೆಗೆ ೧೫೦ ವರ್ಷ ಸಂದ ಹಿನ್ನೆಯಲ್ಲಿ ದೇಶಾದ್ಯಂತ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವ ಸಮಯದಲ್ಲಿ ನಿಲ್ಲುವುದು ಕಡ್ಡಾಯವಾಗಿರುತ್ತದೆ. ಈ ಅವಶ್ಯಕತೆ ಸಿನಿಮಾ ಹಾಲ್‌ಗಳಂತಹ ಸ್ಥಳಗಳಿಗೆ ಅನ್ವಯವಾಗುವುದಿಲ್ಲ, ಶಾಲೆಗಳು ದಿನವನ್ನು ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಲು ನಿರ್ದೇಶಿಸಲಾಗಿದೆ.

ಮಾರ್ಗ ಸೂಚಿಯ ಪ್ರಕಾರ ತ್ರಿವರ್ಣ ಧ್ವಜ ಹಾರಿಸುವುದು ಮತ್ತು ಔಪಚಾರಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಸೇರಿದಂತೆ ಮಹತ್ವದ ಸಂದರ್ಭಗಳಲ್ಲಿ ವಂದೇ ಮಾತರಂನ ಗೀತೆಯ ೬ ಚರಣಗಳ ಪಠಣ ಕಡ್ಡಾಯವಾಗಿದೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆ ಗಾಯನ ನಡೆಯಬೇಕು ಎಂದು ತಿಳಿಸಿದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ನಿಗದಿತ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವುದು ಅಥವಾ ನುಡಿಸುವುದನ್ನು ಕಡ್ಡಾಯಗೊಳಿಸಿದೆ.

ಹೊಸ ನಿಯಮಗಳ ಅಡಿಯಲ್ಲಿ, ೩ ನಿಮಿಷ ಮತ್ತು ೧೦ ಸೆಕೆಂಡುಗಳ ಅವಧಿಯ ರಾಷ್ಟ್ರೀಯ ಗೀತೆಯ ಆರು ಚರಣಗಳ ಆವೃತ್ತಿಯನ್ನು ವಿಶೇಷ ರಾಜ್ಯ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಹಾಡುವುದು ಕಡ್ಡಾಯ ಎಂದು ತಿಳಿಸಿದೆ.

ರಾಷ್ಟ್ರಗೀತೆ ಜನ ಗಣ ಮನ ೫೨ ಸೆಕೆಂಡುಗಳ ಕಾಲ ನಡೆಯುತ್ತದೆ. ಇದೀಗ ವಂದೇ ಮಾತರಂ ರಾಷ್ಡ್ರೀಯ ಗೀತೆಯನ್ನು ೬ ಚರಣಗಳಲ್ಲಿ ಹಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಪದ್ಮ ಪ್ರಶಸ್ತಿಗಳು ಸೇರಿದಂತೆ ನಾಗರಿಕ ಸನ್ಮಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ರಾಷ್ಟ್ರಗೀತೆಯನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಇನ್ನು ಮುಂದೆ ರಾಷ್ಡ್ರೀಯ ಗೀತೆ ವಂದೇ ಮಾತರಂ ಹಾಡುವುದು ಕಡ್ಡಾಯವಾಗಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ವಿಧ್ಯುಕ್ತ ಆಚರಣೆಗಳಲ್ಲಿ ಏಕರೂಪತೆ ಮತ್ತು ಶಿಷ್ಟಾಚಾರ ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮ ಹೊಂದಿದೆ . ಅನುಮೋದಿತ ಆವೃತ್ತಿ ಮತ್ತು ಅದರ ಅವಧಿಯ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಸಂಬಂಧಿತ ಅಧಿಕಾರಿಗಳಿಗೆ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಮಾತರಂನ ೧೫೦ ವರ್ಷಗಳನ್ನು ಆಚರಿಸುವ ವರ್ಷಪೂರ್ತಿ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಈ ನಿರ್ದೇಶನ ಬಂದಿದೆ. ರಾಷ್ಟ್ರಗೀತೆಯ ಗೌರವಾರ್ಥವಾಗಿ ವಿಶೇಷ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಪ್ರಧಾನಿ ಆಚರಣೆಗೆ ಚಾಲನೆ ನೀಡಿದ್ದರು.

ಎದ್ದು ನಿಲ್ಲುವುದು ಕಡ್ಡಾಯ
ಮೊದಲು ರಾಷ್ಡ್ರಗೀತೆ.. ಆ ಬಳಿಕ ವಂದೇ ಮಾತರಂ ಗಾಯನ ನಡೆಯಲಿದೆ ಈ ವೇಳೆ ಎಲ್ಲರೂ ಎದ್ದು ನಿಲ್ಲುವುದು ಕಡ್ಡಾಯವಾಗಿದೆ. ರಾಷ್ಟ್ರಗೀತೆಯ ಮೊದಲು ಮೃದಂಗದ ಧ್ವನಿ ಮೂಡಿಬರುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ವಂದೇ ಮಾತರಂ ಮತ್ತು ಜನ ಗಣ ಮನ ಎರಡನ್ನೂ ನುಡಿಸಿದಾಗ, ಮೊದಲು ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಆ ನಂತರ ವಂದೇ ಮಾತರಂ ಗೀತೆ ಬರಲಿದೆ ಎಂದು ಕೇಂದ್ರ ಸರ್ಕಾರ ತನ್ನ ಮಾರ್ಗ ಸೂಚಿಯಲ್ಲಿ ತಿಳಿಸಿದೆ.