
ಕಲಬುರಗಿ : ಮಾ.28: ಶ್ರೀ ಸಿದ್ಧಾರೂಢ ಸ್ವಾಮೀಜಿಯವರು ಹುಬ್ಬಳ್ಳಿಯಲ್ಲಿ ನೆಲೆಸಿದ ಅದ್ವೈತ ವೇದಾಂತಿ ಮತ್ತು ಪ್ರಸಿದ್ಧ ಸಂತರು. ಅವರು ಜಾತಿ, ಮತ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡು ಸಮ-ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸದ್ಗುರುಗಳಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್ ನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹುಬ್ಬಳ್ಳಿಯಲ್ಲಿನ ಸಿದ್ಧಾರೂಢ ಮಠವು ಸರ್ವ ಧರ್ಮ ಸಮನ್ವಯದ ಕೇಂದ್ರವಾಗಿದ್ದು, ಅವರ ಗದ್ದುಗೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪೂಜ್ಯರು ಅತೀ ಕಿರಿಯ ವಯಸ್ಸಿನಲ್ಲೇ ದೈವಿಕ ಜ್ಞಾನ ಹೊಂದಿದ್ದರು. ಓಂಕಾರದ ಮಹತ್ವ ಸಾರಿದರು. ಅದ್ವೈತ ವೇದಾಂತದ ಅನುಯಾಯಿ, ‘ಸರ್ವ ಧರ್ಮ ಸಮನ್ವಯ’ಕಾರರಾಗಿದ್ದಾರೆ. ಸದ್ಗುರು ಅವರು ಪವಾಡದ ರೂಪದಲ್ಲಿ ಅನೇಕ ಭಕ್ತರ ಸಂಕಷ್ಟಗಳನ್ನು ಪರಿಹರಿಸಿದ್ದಾರೆ. ಸಿದ್ಧಾರೂಢರು ಜಾತಿ, ಪಂಥ, ಬಣ್ಣ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಭಕ್ತರಲ್ಲಿ ಎಂದಿಗೂ ತಾರತಮ್ಯ ಮಾಡಲಿಲ್ಲ. ಪ್ರತಿಯೊಂದರಲ್ಲೂ ದೈವತ್ವವನ್ನು ಕಂಡರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಯಾಣಿಸಿ, ಜನರಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಮೂಡಿಸಿದರು ಮತ್ತು ಸದ್ಗುರುವನ್ನು ಹುಡುಕುವ ಮಾರ್ಗವನ್ನು ತೋರಿಸಿದರು ಎಂದರು. ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್. ಬಿರಾದಾರ, ಅಸ್ಲಾಂ ಶೇಖ್ ಹಾಗೂ ವಿದ್ಯಾರ್ಥಿಗಳು ಇದ್ದರು.



























