ಆರ್‌ಎಸ್‌ಎಸ್ ಟೀಕಿಸುವನೈತಿಕತೆ ಸಿದ್ದರಾಮಯ್ಯರಿಗಿಲ್ಲ

ಬೆಂಗಳೂರು, ಅ. ೧೬- ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ್ನು ಹೊಗಳಿರುವುದನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಧಾನಿ ಮೋದಿ ಹಾಗೂ ಆರ್‌ಎಸ್‌ಎಸ್‌ನ್ನು ಟೀಕಿಸುವ ನೈತಿಕತೆಯಾಗಲೀ, ಅರ್ಹತೆಯಾಗಲೀ ಸಿದ್ದರಾಮಯ್ಯನವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೂಲ ಕಾಂಗ್ರೆಸ್ಸಿಗರಲ್ಲದ ನೀವು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಕಾಂಗ್ರೆಸ್ ಪಕ್ಷದ ಪರ ಸಮರ್ಥನೆಗೆ ನಿಂತಿರುವುದು ಸ್ವಾತಂತ್ರ್ಯ ಚಳವಳಿಯ ಸಾರ್ಥಕತೆ ಸಾರಲು ಪ್ರಜಾಪ್ರಭುತ್ವವನ್ನು ಪುನಃ ಪ್ರತಿಷ್ಠಾಪಿಸಲು ೭೦ರ ದಶಕದಲ್ಲಿ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿದ ಹಲವಾರು ಮಹನೀಯರನ್ನು ಅವಮಾನಿಸಿದಂತೆ. ಸ್ವಾರ್ಥ ಹಾಗೂ ಅಧಿಕಾರ ರಾಜಕಾರಣಕ್ಕಾಗಿ ಕಾಂಗ್ರೆಸ್ ಸೇರಿರುವ ನೀವು ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಹರಿಹಾಯ್ದಿದ್ದಾರೆ.


ಬ್ರಿಟೀಷರ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದ, ಸ್ವಾತಂತ್ರ್ಯ ಸಂಗ್ರಾಮವನ್ನು ಇಂದಿಗೂ ಅಪಮಾನಿಸಿರುವ ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು ಮಾತನಾಡುತ್ತಿರುವ ನಿಮಗೆ ಆರ್‌ಎಸ್‌ಎಸ್ ಬಗ್ಗೆಯಾಗಲೀ, ಪ್ರಧಾನಿ ಬಗ್ಗೆಯಾಗಲೀ ಮಾತನಾಡುವ ಅರ್ಹತೆ ಇಲ್ಲ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.


ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲಿ ಆರ್‌ಎಸ್‌ಎಸ್ ಸಾಧನೆಯನ್ನು ಉಲ್ಲೇಖಿಸಿದ್ದು ಸಂವಿಧಾನದ ಅಪಚಾರ ಎಂದು ಹೇಳಿರುವ ಸಿದ್ದರಾಮಯ್ಯನವರೇ ತುರ್ತು ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯವನ್ನು ಅನುಮಾನಿಸಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಸರ್ವಾಧಿಕಾರತನ ಮೆರೆದ ಕಾಂಗ್ರೆಸ್ ಪಕ್ಷವೇ ರಾಷ್ಟ್ರ ರಾಜಕೀಯದಲ್ಲಿ ಒಂದು ಬಹು ದೊಡ್ಡ ಕಪ್ಪುಚುಕ್ಕೆಯಾಗಿದೆ ಎಂದಿದ್ದಾರೆ.


ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ, ರಾಷ್ಟ್ರ ನಿರ್ಮಾಣಕ್ಕಾಗಿ ಜನ್ಮತಾಳಿ ಶತಮಾನ ಕಂಡ ವಿಶ್ವದ ಅತಿದೊಡ್ಡ ರಾಜಕೀಯೇತರ ಸಂಘಟನೆಯಾಗಿ ಸೇವೆ, ಸಮಾನತೆಯ ತತ್ವವನ್ನು ಅಳವಡಿಸಿಕೊಂಡು ದೇಶ ಕಟ್ಟುತ್ತಿರುವ ರಾಷ್ಟ್ರಭಕ್ತ ಸಂಘಟನೆ ಎಂದು ಅವರು ತಿಳಿಸಿದ್ದಾರೆ.


ಜಾತಿ ರಹಿತ ಸಮಾಜ ಕಟ್ಟುವ ಸಂಘದ ತ್ಯಾಗ ಸಮರ್ಪಣೆಯ ಅಸಂಖ್ಯಾತ ಕಾರ್ಯಕರ್ತರ ಕ್ರಿಯಾಶೀಲತೆಯನ್ನು ಕಂಡು ಮಹಾತ್ಮಗಾಂಧೀಜಿಯವರು ಆರ್‌ಎಸ್‌ಎಸ್‌ನ್ನು ಪ್ರಶಂಸಿಸಿದ ಉಲ್ಲೇಖ ಇತಿಹಾಸ ಪುಟದಲ್ಲಿದೆ. ಚೀನಾ ಯುದ್ಧದ ಸಂದರ್ಭದಲ್ಲಿ ದೇಶ ಸೇವೆಗೆ ನಿಂತ ವೀರ ಯೋಧರ ಸೇವೆಗಾಗಿ ತನ್ನನ್ನು ತೊಡಗಿಸಿಕೊಂಡ ಹೆಮ್ಮೆಯ ಸಂಘಟನೆ. ಈ ಹಿನ್ನೆಲೆಯಲ್ಲಿಯೇ ಅಂದಿನ ಪ್ರಧಾನಿ ನೆಹರುರವರು ಆರ್‌ಎಸ್‌ಎಸ್ ಸೇವೆಯನ್ನು ಇಡೀ ದೇಶವೇ ಗುರುತಿಸಲಿ ಎಂಬ ಪ್ರಶಂಸೆಯ ಸಂಕೇತವಾಗಿ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಸಂಘವನ್ನು ಭಾಗವಹಿಸಲು ಆಹ್ವಾನಿಸಿದ್ದರು ಎಂದು ಅವರು ಟ್ವೀಟ್‌ನಲ್ಲಿ ನೆನಪು ಮಾಡಿಕೊಂಡಿದ್ದಾರೆ.


ಆರ್‌ಎಸ್‌ಎಸ್‌ನ್ನು ಪ್ರಧಾನಿ ಮೋದಿಯವರು ಹೊಗಳಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಏಕೆ ಇಷ್ಟೊಂದು ವಿಚಲಿತರಾಗಿದ್ದೀರಿ, ಸ್ವಾತಂತ್ರ್ಯ ಚಳವಳಿಯ ಉದ್ದೇಶವನ್ನು ಸಾರ್ಥಕಗೊಳಿಸಿ ಮುನ್ನಡೆಯುತ್ತಿರುವ ಆರ್‌ಎಸ್‌ಎಸ್‌ನ್ನು ಪ್ರಶಂಸಿಸಿರುವುದು ಸಮಯೋಚಿತವಾಗಿ ಎಂದು ಹೇಳಿದ್ದಾರೆ.


ಈ ದೇಶದಲ್ಲಿ ಲಕ್ಷಾಂತರ ಜನರ ತ್ಯಾಗ, ಹೋರಾಟದ ಫಲವಾಗಿ ಭಾರತ ಗಳಿಸಿಕೊಂಡ ಸ್ವಾತಂತ್ರ್ಯವನ್ನು ದೇಶದ ಅಭಿವೃದ್ಧಿಗೆ, ಸುರಕ್ಷತೆಗೆ ಕಾಂಗ್ರೆಸ್ ಎಂದೂ ಬಳಸಿಕೊಳ್ಳಲಿಲ್ಲ. ತನ್ನ ಆಡಳಿತ ಕಾಲದಲ್ಲಿ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ತಲೆ ಎತ್ತಲು ಭ್ರಷ್ಟಾಚಾರದ ಹಗರಣಗಳು ಈ ದೇಶವನ್ನು ಕಿತ್ತು ತಿನ್ನುವ ಪರಿಸ್ಥಿತಿಗೆ ತಳ್ಳಿದ್ದು ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.