ಶಿವಲಿಂಗ ಶುದ್ಧೀಕರಣ ವಿವಾದ -ಕಲಬುರ್ಗಿ ಉದ್ವಿಗ್ನ

ಕಲಬುರ್ಗಿ, ಫೆ.೧೬: ಮಹಾಶಿವರಾತ್ರಿ ಹಿನ್ನೆಲೆ ನಗರದಲ್ಲಿರುವ ರಾಮತೀರ್ಥ ದೇವಸ್ಥಾನದಲ್ಲಿ ನಡೆದ ಘಟನೆ ಒಂದು ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಶಿವಲಿಂಗಕ್ಕೆ ಹೂವಿನ ಅಲಂಕಾರ ಮಾಡಿರುವ ವಿಚಾರ ಹಿನ್ನಲೆಯಲ್ಲಿ ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು ಶಿವಲಿಂಗ ಶುದ್ಧೀಕರಣ ನಡೆಸಿದ ಘಟನೆ ಬೆಳಕಿಗೆ ಬಂದಿದೆ.


ನಗರದ ರಿಂಗ್ ರಸ್ತೆಯಲ್ಲಿರುವ ರಾಮತೀರ್ಥ ದೇವಸ್ಥಾನದಲ್ಲಿ ನಿನ್ನೆ ಮಹಾಶಿವರಾತ್ರಿ ಅಂಗವಾಗಿ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆದಿದ್ದವು.

ಈ ಸಂದರ್ಭದಲ್ಲಿ ಅನ್ಯ ಕೋಮಿನ ವ್ಯಕ್ತಿಗಳಿಂದ ಶಿವಲಿಂಗಕ್ಕೆ ಹೂವಿನ ಅಲಂಕಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಈ ವಿಚಾರ ತಿಳಿದ ಕೂಡಲೇ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನಕ್ಕೆ ಆಗಮಿಸಿ ಘಟನೆ ಖಂಡಿಸಿದರು. ಶಿವಲಿಂಗ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಗೋಮೂತ್ರದಿಂದ ಶುದ್ಧೀಕರಣ ನಡೆಸಿದರು.


ಘಟನೆಯಲ್ಲಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಶಿವರಾತ್ರಿ ದಿನದಂದೇ ಈ ರೀತಿಯ ಘಟನೆ ನಡೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆ ದೇವಸ್ಥಾನದ ಆಡಳಿತ ಮಂಡಳಿ ಈ ಬೆಳವಣಿಗೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅನಾವಶ್ಯಕ ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.ಘಟನೆ ಕುರಿತಾಗಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.