ಪೌರಕಾರ್ಮಿಕರಿಗೆ ಉಡುಗೊರೆ ನೀಡಿದ ಶರವಣ

ಬೆಂಗಳೂರು, ಅ. ೨೪- ದೀಪಾವಳಿಯ ಶುಭ ಸಂದರ್ಭದಲ್ಲಿ, ಬೆಂಗಳೂರು ನಗರದ ರಸ್ತೆ ಮತ್ತು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಹಗಲಿರುಳು ಶ್ರಮಿಸುವ ಪೌರ ಕಾರ್ಮಿಕರಿಗೆ ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಅವರು ಸಿಹಿ ಜೊತೆಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಅಲ್ಲದೆ, ಪೌರ ಕಾರ್ಮಿಕರ ಸೇವೆಯನ್ನು ಶ್ಲಾಘಿಸಿ, ಅವರ ಆಶೀರ್ವಾದ ಪಡೆದು ಕೊಂಡರು.


ಪರಿಸರ ಶುಭ್ರವಾಗಿಡಲು ಶ್ರಮಿಸುವ ಸೈನಿಕರು: ಪೌರ ಕಾರ್ಮಿಕರು ಎಂದರೆ ಕೇವಲ ಕೆಲಸಗಾರರಲ್ಲ, ಅವರು ಸ್ವಚ್ಛತೆಯ ರೂವಾರಿಗಳು ಮತ್ತು ಜನರ ಆರೋಗ್ಯ ಕಾಪಾಡುವ ದೇವರು. ಮಳೆ, ಬಿಸಿಲು, ಚಳಿ ಎನ್ನದೆ, ತಮ್ಮ ವೈಯಕ್ತಿಕ ಕಷ್ಟಗಳನ್ನು ಬದಿಗಿಟ್ಟು ನಗರದ ಪರಿಸರವನ್ನು ಶುಭ್ರವಾಗಿಡಲು ಶ್ರಮಿಸುವ ಈ ಸೈನಿಕರ ಸೇವೆ ಅನನ್ಯ ಎಂದು ಶಾಸಕ ಟಿ.ಎ. ಶರವಣ ಬಣ್ಣಿಸಿದರು.


“ನೀವು ಮಾಡುವ ಕೆಲಸದಿಂದಲೇ ನಗರದಲ್ಲಿ ರೋಗರುಜಿನಗಳು ದೂರವಾಗುತ್ತವೆ. ಹಾಗಾಗಿ ನೀವು ನಿಜವಾದ ಆರೋಗ್ಯ ರಕ್ಷಕರು. ನಿಮ್ಮ ಪಾದಗಳಿಗೆ ನಮಸ್ಕರಿಸುವುದು ನಮ್ಮ ಕರ್ತವ್ಯ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ ಎಂದು ಅವರು ಈ ವೇಳೆ ತಿಳಿಸಿದರು.


“ಬೆಂಗಳೂರು ಇಂದು ಸ್ವಚ್ಛ ಮತ್ತು ಸುಂದರ ನಗರವಾಗಿ ಉಳಿದಿದೆ ಎಂದರೆ ಅದು ನಿಮ್ಮ ಶ್ರಮದಿಂದ ಮಾತ್ರ. ಹಬ್ಬದ ದಿನಗಳಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಸಂಭ್ರಮಿಸುತ್ತಿದ್ದರೆ, ನೀವು ರಸ್ತೆಯಲ್ಲಿ ನಿಂತು ಕಸ ಗುಡಿಸುತ್ತೀರಿ. ನಿಮ್ಮ ತ್ಯಾಗಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ದೀಪಾವಳಿ ಬೆಳಕಿನ ಹಬ್ಬ. ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿ, ಉತ್ತಮ ಆರೋಗ್ಯದ ಬೆಳಕು ತುಂಬಲಿ ಎಂದು ನಾನು ಹಾರೈಸುತ್ತೇನೆ” ಎಂದರು.


ಶಾಸಕರಿಂದ ಸಿಹಿ ಮತ್ತು ಉಡುಗೊರೆಗಳನ್ನು ಪಡೆದ ಪೌರ ಕಾರ್ಮಿಕರು ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಶಾಸಕರಿಗೆ ಮನಃಪೂರ್ವಕವಾಗಿ ಆಶೀರ್ವದಿಸಿದರು.