
ಮಾಲೂರು,ಮಾ೩:ಹೋಳಿ ಹುಣ್ಣಿಮೆ ಹಬ್ಬದ ಅಂಗವಾಗಿ ಪಟ್ಟಣದ ಪುರಾತನ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದವವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ದೊಡ್ಡಪೇಟೆ ಮುಖ್ಯರಸ್ತೆಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಶ್ರೀಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ೮.೩೦ಕ್ಕೆ ತಹಸೀಲ್ದಾರ್ ಎಂ.ವಿ. ರೂಪ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯದ ಪ್ರಧಾನ ಅರ್ಚಕ ಶ್ರೀನಾಥ್ ದೀಕ್ಷಿತ್ ಅವರ ನೇತೃತ್ವದಲ್ಲಿ ಕಳೆದ ಒಂಬತ್ತು ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಹೋಳಿ ಹುಣ್ಣಿಮೆ ಪ್ರಯುಕ್ತ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಬಳಿಕ ಸಂಪ್ರದಾಯಬದ್ಧ ಮಂಗಳವಾದ್ಯಗಳೊಂದಿಗೆ ಪಾರ್ವತಿ ಸಮೇತ ಶಂಕರನಾರಾಯಣಸ್ವಾಮಿ ಉತ್ಸವ ಮೂರ್ತಿಗಳನ್ನು ದೇವಾಲಯ ಪ್ರದಕ್ಷಿಣೆ ಮಾಡಿಸಲಾಯಿತು.
ನಂತರ ಅಲಂಕೃತ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ತಹಸೀಲ್ದಾರ್ ಎಂ.ವಿ. ರೂಪ ಹಾಗೂ ಶಾಸಕ ಕೆ.ವೈ. ನಂಜೇಗೌಡ ಅವರು ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥವನ್ನು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ಮಹಿಳೆಯರು ದೇವರಿಗೆ ಹೂವು, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು.
ರಥೋತ್ಸವದ ಅಂಗವಾಗಿ ದೇವಾಲಯ ಆವರಣ ಹಾಗೂ ರಥ ಸಂಚರಿಸಿದ ಮಾರ್ಗಗಳಲ್ಲಿ ಭಕ್ತರಿಗೆ ಪಾನಕ, ನೀರುಮಜ್ಜಿಗೆ ಹಾಗೂ ಕೋಸಂಬರಿ ವಿತರಣೆ ಮಾಡಲಾಯಿತು.
ದೇವಾಲಯ ಪ್ರಧಾನ ಅರ್ಚಕ ಶ್ರೀನಾಥ್ ದೀಕ್ಷಿತ್, ಮುಜರಾಯಿ ಇಲಾಖೆ ಸಿಬ್ಬಂದಿ ಹರಿಪ್ರಸಾದ್, ತಾಲ್ಲೂಕು ಕಚೇರಿ ಅನಿತಾ, ಕೋಟಾ ಲಕ್ಷ್ಮಣ್, ಕೋಟಾ ಹರೀಶ್, ಕೆಂಪಣ್ಣ, ವಕೀಲ ಆನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






























