ಏಳು ಮಂದಿ ಸಜೀವ ದಹನ

ಅಲ್ವಾರ್, ಫೆ.೧೬- ರಾಜಸ್ಥಾನದ ಖುಷ್ಖೇಡ ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಏಳು ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ಈ ಘಟನೆಯಿಂದ ಕೈಗಾರಿಕಾ ಪ್ರದೇಶದಾದ್ಯಂತ ಆತಂಕ ಮೂಡಿಸಿದೆ.

ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ೨೫ ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಸ್ಥಳದಲ್ಲಿಯೇ ೭ ಮಂದಿ ಸಜೀವ ದಹನವಾಗಿದ್ದು ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದೆ. ಒಳಗೆ ಎಷ್ಟು ಮಂದಿ ಸಿಲುಕಿದ್ದಾರೆ. ಎನ್ನುವುದು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ಸು ಬೆಂಕಿ ನಂದಿಸುವ ಮತ್ತು ಕಾರ್ಖಾನೆಯಲ್ಲಿ ಸಿಲುಕಿರುವ ಮಂದಿಯ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಹಿತಿ ಪಡೆದ ಕೂಡಲೇ ಅರ್ಧ ಡಜನ್‌ಗೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಉಸ್ತುವಾರಿ ರಾಜು ಖಾನ್ ಹೇಳಿದ್ದಾರೆ.

ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಕಾರ್ಡ್‌ಬೋರ್ಡ್ ಸಂಗ್ರಹವಿದ್ದು, ಬೆಂಕಿ ನಂದಿಸುವುದು ಅಗ್ನಿಶಾಮಕ ದಳದವರಿಗೆ ಕಷ್ಟಕರವಾಗಿತ್ತು. ಸುರಕ್ಷತಾ ಕಾರಣಗಳಿಗಾಗಿ, ಹತ್ತಿರದ ಇತರ ಕಾರ್ಖಾನೆಗಳನ್ನು ಸ್ಥಳಾಂತರಿಸಲಾಯಿತು ಮತ್ತು ಪ್ರದೇಶಕ್ಕೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಯಿತು. ಕೆಲ ಗಂಟೆಗಳ ತೀವ್ರ ಕಾರ್ಯಾಚರಣೆ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ, ಕೇವಲ ಬೆಂಕಿ ಅವಘಡ ಅಷ್ಟೇ ಎಂದು ಭಾವಿಸಲಾಗಿತ್ತು. ಆದರೆ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿದಾಗ, ಸ್ಫೋಟದ ಸ್ಥಳದಲ್ಲಿ ಏಳು ಜನರು ಸಜೀವ ದಹನವಾಗಿ ಸಾವನ್ನಪ್ಪಿರುವುದು ಸುದ್ದಿ ಎಲ್ಲರಿಗೂ ಆಘಾತವನ್ನುಂಟುಮಾಡಿತು. ಮಾಹಿತಿ ಪಡೆದ ನಂತರ, ಹಿರಿಯ ಭಿವಾಡಿ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮುಚ್ಚಿದ ಕಾರ್ಖಾನೆಯಲ್ಲಿ ದುರಂತ

ಕೈಗಾರಿಕಾ ಪ್ರದೇಶದ ಫ್ಲಾಟ್ ಸಂಖ್ಯೆ ಜಿ-೧, ೧೧೮ ರಲ್ಲಿರುವ ಈ ಕಾರ್ಖಾನೆಯು ಹಲವಾರು ತಿಂಗಳುಗಳಿಂದ ಬಂದ್ ಆಗಿತ್ತು. ಬೆಳಗ್ಗೆ ೧೦ ಗಂಟೆ ಸುಮಾರಿಗೆ, ಕಾರ್ಖಾನೆಯ ಒಳಗಿನಿಂದ ದಟ್ಟವಾದ, ಕಪ್ಪು ಹೊಗೆ ಇದ್ದಕ್ಕಿದ್ದಂತೆ ಹೊರಹೊಮ್ಮಲು ಪ್ರಾರಂಭಿಸಿದ್ದು ರಕ್ಷಣಾ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಸುಮಿತಾ ಮಿಶ್ರಾ ಹೇಳಿದ್ದಾರೆ

ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿಯು ಇಡೀ ಕಟ್ಟಡವನ್ನು ಆವರಿಸಿತು. ಸುತ್ತಮುತ್ತಲಿನ ಪ್ರದೇಶವು ನಡುಗುವಷ್ಟು ಶಕ್ತಿಶಾಲಿಯಾದ ಮೂರರಿಂದ ನಾಲ್ಕು ಸ್ಫೋಟಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.

ಕಾರ್ಖಾನೆ ನಿರ್ವಹಣೆ ಬಗ್ಗೆ ತನಿಖೆ

ಕಾರ್ಖಾನೆಯೊಳಗೆ ಸಂಗ್ರಹಿಸಲಾದ ಗ್ಯಾಸ್ ಸಿಲಿಂಡರ್‌ಗಳಿಂದ ಸ್ಫೋಟ ಸಂಭವಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಮುಚ್ಚಿದ ಕಾರ್ಖಾನೆಯೊಳಗಿನ ಚಟುವಟಿಕೆಯು ಪೊಲೀಸರಿಗೆ ತನಿಖೆಯ ಪ್ರಮುಖ ಅಂಶವಾಗಿದೆ. ಭಿವಾಡಿ ಪೊಲೀಸರು ಬೆಂಕಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿದೆಯೇ ಅಥವಾ ಇನ್ನಾವುದೇ ಅನುಮಾನಾಸ್ಪದ ಚಟುವಟಿಕೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತಈಗ ಇತರ ಕೈಗಾರಿಕಾ ಘಟಕಗಳಿಗೆ ತಮ್ಮ ಸುರಕ್ಷತಾ ಮಾನದಂಡಗಳನ್ನು ತಕ್ಷಣ ಪರಿಶೀಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ.