
ಹುಬ್ಬಳ್ಳಿ,ಡಿ13: ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಈ ವರ್ಷ ಡಾ. ಬಸವರಾಜ ಸಾದರ ಹಾಗೂ ಡಾ. ಶಶಿಕಾಂತ್ ಪಟ್ಟಣ ಅವರು ಆಯ್ಕೆ ಆಗಿದ್ದಾರೆ.
ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳಿಂದ ವಿವಿಧ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ “ಸಂಗಮ ಸಿರಿ ” ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತ ಬಂದಿದೆ. ಈ ವರ್ಷ ವಚನ ಸಾಹಿತ್ಯ ಪೂರಕ ಸಾಹಿತ್ಯದಲ್ಲಿ ಕಾರ್ಯ ಮಾಡಿದವರಿಗೆ ” ಸಂಗಮ ಸಿರಿ ” ಪ್ರಶಸ್ತಿ ನೀಡಲು ನಿರ್ಧರಿಸಿದಂತೆ ಈ ಕ್ಷೇತ್ರದಲ್ಲಿ ಕಾರ್ಯ ಮಾಡಿದ ಆಕಾಶವಾಣಿ ನಿರ್ದೇಶಕರಾಗಿ ನಿವೃತ್ತರಾದ ಬೆಂಗಳೂರಿನ ಡಾ. ಬಸವರಾಜ ಸಾದರ ಹಾಗೂ ಮಹಾರಾಷ್ಟ್ರ ಪುಣೆಯ ವಿಜ್ಞಾನಿ ಡಾ. ಶಶಿಕಾಂತ್ ಪಟ್ಟಣ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಡಿ.28ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೋಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.

























