
ಕೊಯಮತ್ತೂರು, ಫೆ.೧೬:ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕ ಹಾಗೂ ಶಿಕ್ಷಣ ತಜ್ಞ ಶ್ರೀ ಎಸ್. ಆರ್ಥರ್ ಲವ್ ಅವರಿಗೆ ರಾಷ್ಟ್ರೀಯ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪ್ರದಾನ ಮಾಡಲಾಗಿದೆ. ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಅವರ ಅಪಾರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಆರ್ಥರ್ ಲವ್ ಅವರು ಕಳೆದ ೪೦ ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಶಾಲಾ ಬಿಡುವಿಕೆ ಪ್ರಮಾಣವನ್ನು ಕಡಿಮೆ ಮಾಡಲು ಮಹತ್ವದ ಪಾತ್ರವಹಿಸಿದ್ದಾರೆ. ಉಚಿತ ರಾತ್ರಿ ಶಾಲೆಗಳು, ಪ್ರೌಢರ ಶಿಕ್ಷಣ ಕಾರ್ಯಕ್ರಮಗಳು ಹಾಗೂ ಕ್ರೀಡೆ-ಕ್ರೀಡಾಕೂಟಗಳ ಉಚಿತ ಬೇಸಿಗೆ ತರಬೇತಿಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಉತ್ತೇಜನ ಮೂಡಿಸಿ, ಉತ್ತಮ ಸಾಧನೆಗೆ ದಾರಿ ತೋರಿಸಿದ್ದಾರೆ.
ಮಾನವ ಹಕ್ಕು ಹೋರಾಟಗಾರರಾಗಿ ಅವರು ಮಕ್ಕಳ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮುಂದಾಗಿದ್ದಾರೆ. ದೈಹಿಕ ಶಿಕ್ಷೆ, ಬಾಲಕಾರ್ಮಿಕತೆ ಹಾಗೂ ಬಾಲ್ಯವಿವಾಹಗಳ ವಿರುದ್ಧ ಜಾಗೃತಿ ಮೂಡಿಸಿ, ಮಕ್ಕಳ ಹಕ್ಕುಗಳ ಪಾಲನೆಗೆ ಸಂಬಂಧಿಸಿದಂತೆ ವಿವಿಧ ಸರ್ಕಾರಿ ಇಲಾಖೆ, ಎನ್‌ಜಿಒಗಳು, ನಾಗರಿಕ ಸಮಾಜ ಹಾಗೂ ಪೊಲೀಸ್ ಮತ್ತು ಶಿಕ್ಷಣ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರವೂ ಅವರಿಗೆ ನೀಡಲಾಗಿದೆ.
ಅವರು ಯುಎನ್ ಯುನಿಸೇಫ್ ಯುನೇಸ್ಕೋ ಹಾಗೂ ಖಿಗಿ೯ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಆರ್.ಎಸ್. ಲಾಲ್ ಅವರ ಸ್ಮರಣಾರ್ಥವಾಗಿ ನವಕ್ಕರೈ, ಕೊಯಮತ್ತೂರುನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನಿಸಲಾಯಿತು.

























