
ವಿಜಯಪುರ, ಡಿ. 7 : ಮೈ ಕೊರೆವ ಚಳಿ ಲೆಕ್ಕಿಸದೇ ನೂರಾರು ಓಟಗಾರರು ವಿಜಯಪುರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಓಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
ಪರಿಸರ ರಕ್ಷಣೆಯ ಧ್ಯೇಯದೊಂದಿಗೆ ನಡೆದ ಮ್ಯಾರಾಥಾನ್ ಯಶಸ್ವಿಯಾಗಿ ನಡೆಯಿತು.
ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಮ್ಯಾರಾಥಾನ್‌ನಲ್ಲಿ ಪರಿಸರ ರಕ್ಷಣೆಯ ಕಾಳಜಿಯ ರಣ ಕಹಳೆ ಮೊಳಗಿತು.
ಎಲ್ಲೆಡೆ ಹಳದಿ ವರ್ಣದ ಟೀ-ಶರ್ಟ್ ಧರಿಸಿ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡ ಯುವಕರ, ಹಿರಿಯ ದಂಡು ಕಂಡು ಬಂದಿತು. ಓಡು…ಓಡು….ಪರಿಸರಕ್ಕಾಗಿ ಓಡು ಎಂಬ ದಿವ್ಯ ಸಂದೇಶದೊಂದಿಗೆ ಹದಿನೈದು ಸಾವಿರಕ್ಕೂ ಅಧಿಕ ಸಾರ್ವಜನಿಕರು ಈ ಓಟದಲ್ಲಿ ಹೆಜ್ಜೆ ಹಾಕುವ ಮೂಲಕ ಪರಿಸರ ರಕ್ಷಣೆಯ ಸಂದೇಶ ಸಾರಿ ವೃಕ್ಷ ನೆಡುವ ದಿವ್ಯ ಸಂಕಲ್ಪ ತೊಟ್ಟರು.
ಸಚಿವ ಡಾ.ಎಂ.ಬಿ. ಪಾಟೀಲರ ದೂರದೃಷ್ಟಿ, ಪರಿಸರ ಕಾಳಜಿಯ ಫಲವಾಗಿ ರೂಪುಗೊಂಡ ವೃಕ್ಷೋಥಾನ್ ಓಟ ಆರನೇ ಬಾರಿಯೂ ಯಶಸ್ಸು ಹಾಗೂ ಪರಿಸರ ರಕ್ಷಣೆಯ ಸಂದೇಶದ ಗೆರೆಯನ್ನು ತಲುಪಲು ಯಶಸ್ವಿಯಾಯಿತು.
ವೃಕ್ಷ ಅಭಿಯಾನ ಟ್ರಸ್ಟ್, ಜಿಲ್ಲಾಡಳಿತ, ಬಿಎಲ್‌ಡಿಇ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮ್ಯಾರಾಥಾನ್‌ಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಸಚಿವ ಡಾ.ಎಂ.ಬಿ. ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಮೇಯರ್ ಎಂ.ಎಸ್. ಕರಡಿ, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕರು ಓಟದಲ್ಲಿ ಪಾಲ್ಗೊಂಡು ಓಟಗಾರರಿಗೆ ಪ್ರೋತ್ಸಾಹ ತುಂಬಿದ್ದು ವಿಶೇಷವಾಗಿತ್ತು.
ಸಾವಿರಾರು ಸಂಖ್ಯೆಯ ಯುವಜನತೆ, ಹಿರಿಯರು ಅಷ್ಟೇ ಏಕೆ ಚಿಕ್ಕಮಕ್ಕಳು ಸಹ ಪಾಲ್ಗೊಂಡು ಉತ್ಸಾಹದಿಂದ ಓಡಿದರು.
ಬೆಳಿಗ್ಗೆಯಿಂದಲೇ ಟೀ-ಶರ್ಟ್ ಧರಿಸಿದ ಯುವಕರ ದಂಡು ನಗರದೆಲ್ಲೆಡೆ ಕಂಡು ಬಂದಿತು. ಓಟ ನಡೆಯುವ ಡಾ.ಬಿ.ಆರ್. ಅಂಬೇಡ್ಕರ ಕ್ರೀಡಾಂಗಣ, ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪರಿಸರ ಅಭಿಮಾನಿಗಳು ಕಿಕ್ಕಿರಿದು ಸಮಾವೇಶಗೊಂಡಿದ್ದರು.
ಅನೇಕ ಸ್ವಯಂ ಸೇವಕರು ಓಟಗಾರರಿಗೆ ನೆರವಾಗುವ ದೃಶ್ಯ ಗೋಚರಿಸಿತು. ಅನೇಕ ಓಟಗಾರರಿಗೆ ದಣಿವಾರಿಸಿಕೊಳ್ಳಲು ಗ್ಲುಕೋಸ್ ಪೌಡರ್, ನೀರು ನೀಡುವಲ್ಲಿ ತೊಡಗಿಸಿಕೊಂಡರು. ಅನೇಕ ಕಡೆಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಓಟಗಾರರು ಎಲ್ಲಿ ನಿಂತರೆ ಸಮಯ ವ್ಯರ್ಥವಾಗುತ್ತದೆ ಎಂದು ಗುರಿಯತ್ತ ಧಾವಿಸಿದಾಗ ಸ್ವಯಂ ಸೇವಕರು ಓಡುತ್ತಲೇ ಗುಕ್ಲೋಸ್ ಪೌಡರ್ ಅವರ ಕೈಗಿರಿಸುವ ದೃಶ್ಯವೂ ಸಹ ಗೋಚರಿಸಿತು. ಅಲ್ಲಲ್ಲಿ ಜುಂಬಾ ಮೊದಲಾದ ನೃತ್ಯಗಳ ವೇದಿಕೆಗಳನ್ನು ಸೃಜಿಸಲಾಗಿತ್ತು. ಅಲ್ಲಿ ನುರಿತ ಕಲಾವಿದರು ಜುಂಬಾ ನೃತ್ಯ ಪ್ರದರ್ಶಿಸಿ ಓಟಗಾರರಿಗೆ ಪ್ರೋತ್ಸಾಹ ಹಾಗೂ ಉತ್ಸಾಹ ತುಂಬಿದರು.
ತಲೆಯ ಮೇಲೆ ವೃಕ್ಷ
ಈ ಓಟದಲ್ಲಿ ಯುವಕನೋರ್ವ ತನ್ನ ತಲೆಯ ಮೇಲೆ ಸಸಿಯನ್ನಿಟ್ಟುಕೊಂಡು ಪರಿಸ ರಕ್ಷಣೆ ಸಂದೇಶ ಸಾರಿದ್ದು ವಿಶೇಷವಾಗಿತ್ತು. ವೃಕ್ಷ ರಕ್ಷಣೆ ಸಂದೇಶಕ್ಕಾಗಿ ವೃಕ್ಷವನ್ನೇ ಶಿರದ ಮೇಲೆ ಇರಿಸಿಕೊಂಡು ಬಂದಿದ್ದ ಯುವಕನ ಜೊತೆ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಯುವಕರ ಅಮಿತೋತ್ಸಾಹದ ನೃತ್ಯ…
ಓಟಗಾರರು ಓಡಿ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸಂತಸಪಟ್ಟರು. ನಿಸರ್ಗ ರಕ್ಷಣೆಯ ಸಂದೇಶವನ್ನು ತಮ್ಮ ಪ್ರವಚನದಲ್ಲಿ ಸಾರುತ್ತಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಭಾವಚಿತ್ರದ ಮೆಡಲ್ ಧರಿಸಿ ಧನ್ಯತಾ ಭಾವದಲ್ಲಿ ಓಟಗಾರರು ಮಿಂದೆದ್ದರು.
ತಾವು ಪಡೆದ ಮೆಡಲ್‌ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಂತೋಷ ಪಟ್ಟರು. `ಪರಿಸರಕ್ಕಾಗಿ ಓಟ…’ ಎಂಬ ಸಂದೇಶವನ್ನು ಅಡಕಗೊಳಿಸಿ ಪರಿಸರ ರಕ್ಷಣೆಯ ಸಂದೇಶವನ್ನು ಸಾರಿದರು.
ನಂತರ ಸಾವಿರಾರು ಜಮಾಯಿಸಿದ್ದ ಯುವಕರು ವಿವಿಧ ನೃತ್ಯಗಳಿಗ ಹೆಜ್ಜೆ ಹಾಕಿದರು. ಡಿಜೆಯಲ್ಲಿ ಮೊಳಗಿದ ಜಾನಪದ ಗೀತೆಗಳಿಗೆ ಭರಪೂರ ಹೆಜ್ಜೆ ಹಾಕಿದರು, ಇನ್ನೂ ಕೆಲವರು ನೃತ್ಯ ಮಾಡಿ ಸಂಭ್ರಮದಲ್ಲಿ ಮಿಂದೆದ್ದರು.
ಗಮನ ಸೆಳೆದ ವೇದಿಕೆ ಸಂದೇಶ
ಪ್ರತಿಬಾರಿಯೂ ಅರ್ಥಪೂರ್ಣ ಸಂದೇಶದೊಂದಿಗೆ ಬೃಹತ್ ವೇದಿಕೆ ವೃಕ್ಷಾಥಾನ್ ಸಂದರ್ಭದಲ್ಲಿ ರಾರಾಜಿಸುತ್ತದೆ.
ಇತ್ತೀಚಿಗೆ ನಮ್ಮನ್ನು ಅಗಲಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಸಂತೃಪ್ತ ಭಾವನೆಯಿಂದ ಹೇಳುತ್ತಿರುವಂತೆ `ನನಗೆ ಮಕ್ಕಳಾಗಲಿಲ್ಲ ನಿಜ, ಆದರೆ ಸಾವಿರಾರು ವೃಕ್ಷಗಳನ್ನು ಮಕ್ಕಳಂತೆ ಬೆಳೆಸಿದ್ದೇನೆ’ ಎಂಬ ಸಂದೇಶ ನೋಡಿದಾಗ ಪ್ರತಿಯೊಬ್ಬರಲ್ಲಿ ಪರಿಸರ ರಕ್ಷಣೆಯ ಭಾವ ಜಾಗೃತವಾಗುವಂತೆ ಮಾಡಿತು.
ಸ್ವಾಮೀಜಿಗಳ ಸಾಥ್
ಪರಿಸರ ರಕ್ಷಣೆಯ ಸಂದೇಶ ಸಾರುವ ವೃಕ್ಷೋಥಾನ್‌ದಲ್ಲಿ ಅನೇಕ ಮಠಾಧೀಶರು ಸಹ ಸಹ ಓಟಗಾರರೊಂದಿಗೆ ಓಡಿ ಪರಿಸರ ರಕ್ಷಣೆಯ ಸಂದೇಶ ಸಾರಿದ್ದು ವಿಶೇಷವಾಗಿತ್ತು.
ಪರಿಸರ ರಕ್ಷಣೆಗಾಗಿ ನಡೆದ ಓಟದಲ್ಲಿ ಪಾಲ್ಗೊಂಡಿರುವುದೇ ಖುಷಿ ತರಿಸಿದೆ. ಇದು ಒಂದು ರೀತಿ ಅದ್ಭುತ ಅನುಭವ. ಮ್ಯಾರಾಥಾನ್‌ನಲ್ಲಿಯೂ ಪರಿಸರ ರಕ್ಷಣೆಯ ಸಂದೇಶ ಸಾರುವ ಕಾರ್ಯ ಮಾಡಿರುವ ಅಪೂರ್ವ ಕಾರ್ಯವನ್ನು ಸಚಿವ ಡಾ.ಎಂ.ಬಿ. ಪಾಟೀಲ ಕೈಗೊಂಡಿರುವುದು ಅರ್ಥಪೂರ್ಣ. ಈ ಓಟದ ಜೊತೆಗೆ ಪರಿಸರ ರಕ್ಷಣೆಗೂ ಸಂಕಲ್ಪ ಮಾಡೋಣ…
-ರವೀಂದ್ರ ಬಿಜ್ಜರಗಿ, ಉದ್ಯಮಿ ವಿಜಯಪುರ

























