ಆರ್‌ಎಸ್‌ಎಸ್ ನಿಂದನೆ ಆಕಾಶಕ್ಕೆ ಉಗುಳಿದಂತೆ: ಆರ್. ಅಶೋಕ್

ಬೆಂಗಳೂರು, ಫೆ. ೧೬- ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಂದನೆ ಮಾಡುವುದು ಒಂದೇ, ಆಕಾಶಕ್ಕೆ ಉಗಿಯುವುದು ಒಂದೇ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಚಿವ ಪ್ರಿಯಾಂಕ ಖರ್ಗೆಯವರಿಗೆ ತಿರುಗೇಟು ನೀಡಿದ್ದಾರೆ.


ಆರ್‌ಎಸ್‌ಎಸ್ ದೆವ್ವ ಇದ್ದಂತೆ ಎಂದು ಟೀಕಿಸಿದ್ದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ಆರ್. ಅಶೋಕ್ ಅವರು, ಆರ್‌ಎಸ್‌ಎಸ್ ಸಂಘಟನೆಯನ್ನು ವಾಚಾಮಗೋಚರವಾಗಿ ಬೈಯ್ದರೆ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ಪಡೆಯಬಹುದು, ಇನ್ನು ಹೆಚ್ಚಿನ ಅಧಿಕಾರ ಸಿಗಬಹುದು ಎಂಬ ಭ್ರಮೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಇದನ್ನೇ ನಿತ್ಯ ಚಾಳಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ೪ ದಶಕಗಳಿಂದ ಕಲ್ಯಾಣ ಕರ್ನಾಟಕ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ ನಾಳೆ ಬಾ ಎಂಬ ಶಾಶ್ವತವಾದ ಬೋರ್ಡ್ ಹಾಕಿಕೊಂಡು ಕಲ್ಯಾಣ ಕರ್ನಾಟಕದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ದೆವ್ವಗಳನ್ನು ಓಡಿಸುವ ದಿನ ಬಹಳ ದೂರವಿಲ್ಲ ಎಂದು ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ನೀರಿಗೆ ಬರ


ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಬರ ಕಾಣಿಸಿಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೇ ಬೆಂಗಳೂರಿಗೆ ನೀರಿನ ಗ್ಯಾರಂಟಿ ಎಲ್ಲಿದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.


ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಕುಡಿಯುವ ನೀರಿನ ಕೊರತೆ ಕಾಣಿಸಿಕೊಂಡಿದೆ. ಬೋರ್‌ವೆಲ್‌ಗಳು ವಿಫಲವಾಗುತ್ತಿವೆ. ಟ್ಯಾಂಕರ್ ನೀರು ಗಗನಕ್ಕೇರಿದೆ. ಕುಡಿಯುವ ನೀರಿಗಾಗಿ ಮಧ್ಯಮ ವರ್ಗದ ಜನತೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.


ಬೆಂಗಳೂರು ನಗರದ ಕುಡಿಯುವ ನೀರಿನ ಕೊರತೆ ನೀಗಿಸಲು ಸರಿಯಾದ ಕ್ರಮಗಳು ಆಗಿಲ್ಲ ಎಂದು ಟೀಕಿಸಿರುವ ಅವರು, ವಾಟರ್ ಟ್ಯಾಂಕರ್ ಮಾಫಿಯಾವನ್ನು ನಿಗ್ರಹಿಸುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.