ರೌಡಿ ಶೀಟರ್ ಮುನ್ನಾ ಗಡಿಪಾರು

ಕಲಬುರಗಿ,ಫೆ.20-ನಗರದ ಸೋನಿಯಾಗಾಂಧಿ ಕಾಲೋನಿ ನಿವಾಸಿ ರೌಡಿ ಶೀಟರ್ ಮುನ್ನಾ ಅಲಿಯಾಸ್ ಮಿರ್ಜಾ ಮುನ್ನಾವರನನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈತನ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಆರೋಪಿಯು ರೂಢಿಗತ ಅಪರಾಧಿಯಾಗಿದ್ದಾನೆ. 2021 ರಿಂದ 2025ರವರೆಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 2 ಪ್ರಕರಣ, ಬಿಎನ್‍ಎಸ್ ಕಾಯ್ದೆ-2023ರಲ್ಲಿ 1 ಪ್ರಕರಣ, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ 1 ಪ್ರಕರಣ ಸೇರಿ ಒಟ್ಟು 4 ಪ್ರಕರಣ ದಾಖಲಾಗಿದ್ದು, “ಎ”ರೌಡಿ ಎಂದು ಗುರುತಿಸಲಾಗಿದೆ.
ಆರೋಪಿಯು ರೌಡಿ ಶೀಟರ್ ಆಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಹೊಡೆದಾಟ, ಅಪಾಯಕಾರಿ ಆಯುಧಗಳಿಂದ ಸ್ವ ಇಚ್ಛೆಯಿಂದ ಗಾಯವನ್ನುಂಟು ಮಾಡುವುದು, ಅಕ್ರಮ ಆಯುಧ ಹೊಂದಿ ದರೋಡೆಗೆ ಪ್ರಯತ್ನ ಮಾಡುವುದು, ಹಲ್ಲೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಜೀವ ಭಯ ಹಾಕುವುದು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದ ಮೇರೆಗೆ ಆರೋಪಿಯನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾದದ್ದು ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಖರ ತಿಗಡಿ ಅವರು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಉಪ ಪೊಲೀಸ್ ಆಯುಕ್ತರು ಹಾಗೂ ನ್ಯಾಯಾಲಯದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.