ರೌಡಿ ಶೀಟರ್ ಲಕ್ಷ್ಮಿಪುತ್ರ ತುಗದಿ ಗಡಿಪಾರು

ಕಲಬುರಗಿ,ಫೆ.20-ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿ, ರೌಡಿಶೀಟರ್ ಲಕ್ಷ್ಮಿಪುತ್ರ ತಂದೆ ಶರಣಬಸಪ್ಪ ತುಗದಿ (28)ಯನ್ನು ಬೆಂಗಳೂರು ನಗರ, ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈತನ ಮೇಲೆ ನಗರದ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳ ಅಡಿಯಲ್ಲಿ 1 ಕೊಲೆ ಪ್ರರಕಣ ದಾಖಲಾಗಿದೆ. ಆರೋಪಿಯು ರೂಢಿಗತ ಅಪರಾಧಿಯಾಗಿದ್ದು, 2024ನೇ ಸಾಲಿನಲ್ಲಿ ಬಿಎನ್‍ಎಸ್ ಕಾಯ್ದೆ-2023ರಲ್ಲಿ 1 ಪ್ರಕರಣ ದಾಖಲಾಗಿದೆ. ಆರೋಪಿಯು ರೂಢಿಗತ ಆಪಾದಿತನಾಗಿದ್ದು, “ಎ”ರೌಡಿ ಎಂದು ಗುರುತಿಸಲಾಗಿದೆ.
ವಿವಿಧ ಠಾಣೆಗಳಲ್ಲಿ ಈತನ ಸಹಚರರ ವಿರುದ್ಧ ವಿಧಿ ವಿರುದ್ಧ ಕೂಟ ರಚಿಸುವುದು, ಮಾರಕ ಆಯುಧ ಹೊಂದಿ ದೊಂಬಿ ಮಾಡುವುದು. ಕೊಲೆಗೆ ಯತ್ನ, ಅಕ್ರಮ ಪ್ರತಿಬಂಧಕ, ಸ್ವ-ಇಚ್ಛೆಯಿಂದ ಗಾಯನ್ನುಂಟು ಮಾಡುವ ಸಾಧ್ಯತೆ, ಅಪಾಯಕಾರಿ ಆಯುಧಗಳಿಂದ ಸ್ವ-ಇಚ್ಛೆಯಿಂದ ಗಾಯವನ್ನುಂಟು ಮಾಡುವುದು, ಮನೆಗೆ ಕನ್ನ ಹಾಕುವುದು, ಅಪರಾಧಿತಕ ಭಯೋತ್ಪಾದನೆ ಮತ್ತು ಅಪಾಯಕಾರಿ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡುವಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದ ಮೇರೆಗೆ ಆರೋಪಿಯನ್ನು ಗಡಿಪಾರು ಮಾಡುವುದು ಸೂಕ್ತ ಎಂದು ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ ಅವರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪ-ಪೊಲೀಸ್ ಆಯುಕ್ತರು ಹಾಗೂ ನ್ಯಾಯಾಲಯದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.