ಗುಂಡಿಕ್ಕಿ ರೌಡಿ ಪವನ್ ಹತ್ಯೆ ಆರೋಪಿ ಸೆರೆ

ಬೆಂಗಳೂರು,ಫೆ.೨೮-ಕೊಲೆ,ಕೊಲೆಯತ್ನ,ಬೆದರಿಕೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಗೆ ಸಂಪಿಗೆಹಳ್ಳಿ ಪೊಲೀಸರು ಇಂದು ಬೆಳಿಗ್ಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ತಾಯಿಯ ಎದುರೇ ರೌಡಿ ಪವನ್ ಕುಮಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲೆಮರೆಸಿಕೊಂಡಿದ್ದ ರಂಜನ್ (೨೮) ಗೆ ಸಂಪಿಗೆಹಳ್ಳಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದು,ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.


ರೌಡಿ ಪವನ್ ಕುಮಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಂಜನ್ ಬಾಗಲೂರು ಸಮೀಪದ ನಿರ್ಜನ ಪ್ರದೇಶವೊಂದರಲ್ಲಿ ಅಡಗಿರುವ ಖಚಿತವಾದ ಮಾಹಿತಿಯನ್ನು ಬೆಳಿಗ್ಗೆ ೬ ರ ವೇಳೆ ಆಧರಿಸಿ ಆತನನ್ನು ಬಂಧಿಸಲು ಸಂಪಿಗೆಹಳ್ಳಿ ಇನ್ಸ್‌ಪೆಕ್ಟರ್ ವೆಂಕಟೇಶ್ ಸಿಬ್ಬಂದಿಯ ಜೊತೆ ಧಾವಿಸಿ ಬಂಧಿಸಲು ಮುಂದಾದರು.


ಪೊಲೀಸರನ್ನು ಕಂಡು ತಪ್ಪಿಸಿ ಯತ್ನಿಸಿದ ರಂಜನ್ ಬೆನ್ನತ್ತಿ ಬಂದ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದಾನೆ,


ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗೆ ಮತ್ತೊಂದು ಗುಂಡು ಹಾರಿಸಿದ್ದು,ಅದು ಕಾಲಿಗೆ ತಗುಲಿ ರಂಜನ್ ಕುಸಿದು ಬಿದ್ದಿದ್ದಾನೆ.
ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ,ರಂಜನ್ ಮಡಿವಾಳ ಬಾಣಸವಾಡಿ ಹಾಗೂ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು,ಆತನ ವಿರುದ್ಧ ೬ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ಮಿಥುನ್ ಕುಮಾರ್ ತಿಳಿಸಿದರು.


ರೌಡಿ ಪವನ್ ಕೊಲೆ:
ಕಳೆದ ಫೆ. ೨೫ರಂದು ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ ಪವನ್ ಕುಮಾರ್ (೨೮)ನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು.


ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು, ಪವನ್ ಕುಮಾರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.


ಡಿ.ಜೆ ಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಪವನ್ ಕುಮಾರ್, ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರರಣದಲ್ಲಿ ಬಂಧಿತನಾಗಿದ್ದ. ಕಳೆದ ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಒಂದೂವರೆ ತಿಂಗಳ ಹಿಂದಷ್ಟೇ ಬೇಕರಿಯನ್ನು ಆರಂಭಿಸಿದ್ದ. ಆದರೆ ಕಪಿಲ್‌ನ ಹತ್ಯೆಯಾದ ಮಾದರಿಯಲ್ಲೇ ಹೆಲ್ಮೆಟ್ ಧರಿಸಿದ್ದ ತಂಡ ಪವನ್ ಕುಮಾರ್‌ನನ್ನ ಸಹ ಹತ್ಯೆಗೈದು ಪರಾರಿಯಾಗಿತ್ತು.