ಆರ್‍ಜಿಪಿಆರ್ ಫೆಲೋ ತರಬೇತಿ ಕಾರ್ಯಕ್ರಮ ಯಶಸ್ವಿ

ಕಲಬುರಗಿ,ಫೆ 22: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ(ಆರ್‍ಜಿಪಿಆರ್ )ಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮವು ಕಲಬುರಗಿ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) – ಕರ್ನಾಟಕ ಪ್ರಾದೇಶಿಕ ಶಾಖೆ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಕಲಬುರಗಿ ಸ್ಥಳೀಯ ಶಾಖೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಆಡಳಿತ, ನೀರು ಸರಬರಾಜು, ಘನ ತ್ಯಾಜ್ಯ ನಿರ್ವಹಣೆ, ಉಪ ಸಮಿತಿಗಳು, ಮಕ್ಕಳ, ಮಹಿಳಾ ಮತ್ತು ಅಂಗವಿಕಲ ವ್ಯಕ್ತಿಗಳ ಉದ್ದೇಶಿತ ಆಯವ್ಯಯ ಮತ್ತು ಪಂಚಾಯಿತಿಗಳಿಗೆ ಸಂಬಂಧಿಸಿದ ತಂತ್ರಾಂಶಗಳ ಒಳಗೊಂಡ ವಿಷಯಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು. ಕಾರ್ಯಕ್ರಮವು ಫೆಲೋಗಳ ಸಾಮಥ್ರ್ಯವರ್ಧನೆಗೆ ಹಾಗೂ ಪರಿಣಾಮಕಾರಿ ಕ್ಷೇತ್ರ ಕಾರ್ಯಾಚರಣೆಗೆ ದಾರಿಯಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಉಮಾಮಾದೇವನ್ (ಎಸಿಎಸ್ ಹಾಗೂ ಅಭಿವೃದ್ಧಿ ಆಯುಕ್ತರು ), ಪ್ರ್ರಿಯಾಂಕ ಮೇರಿ ಫ್ರಾನ್ಸಿಸ್ (ನಿರ್ದೇಶಕರು ಎನ್ ಜಿ ಎಂ ಎ), ರಾಹುಲ್ ಶಿಂದೆ (ಸಿಇಓ ಜಿಪಂ ಬೆಳಗಾವಿ), ಡಾ.ದಿಲೀಷ ಶಶಿ (ಸಿಇಓ ಜಿಪಂ ಕಾರವಾರ) ಅವರು ವಿಡಿಯೋ ಸಂವಾದದ ಮೂಲಕ ಹಾಗು ಕಲಬುರಗಿ ಜಿಪಂ ಸಿಇಓ ಭಂವರ್ ಸಿಂಗ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ತಜ್ಞರುಗಳು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೆಕೆಆರ್ ಡಿ ಬಿ ಕಾರ್ಯದರ್ಶಿ ನಳಿನ್ ಅತುಲ್ ಭಾಗವಹಿಸಿ ಮಾತನಾಡಿದರು.