ಸೌಜನ್ಯ ತಾಯಿ ಹೇಳಿದ ನೈಜ ಸಂಗತಿ ಬಹಿರಂಗಪಡಿಸಿ

ಬೆಂಗಳೂರು,ಸೆ.೩:ಧರ್ಮಸ್ಥಳದಲ್ಲಿ ಸೌಜನ್ಯ ತಾಯಿಯನ್ನು ಭೇಟಿ ಮಾಡಿದ್ದ ಬಿಜೆಪಿ ನಾಯಕರಿಗೆ ಸೌಜನ್ಯ ತಾಯಿ ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸುವ ಧೈರ್ಯವಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ಖರ್ಗೆ ಸವಾಲು ಹಾಕಿದ್ದಾರೆ.


ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಚಲೋ ಮಾಡಿದ ಬಿಜೆಪಿ ನಾಯಕರು ಸೌಜನ್ಯ ತಾಯಿ ಹೇಳಿದ ಸತ್ಯಸಂಗತಿಯನ್ನು ಬಹಿರಂಗಪಡಿಸಲಿ ಎಂದು ಸಾಮಾಜಿಕ ಜಾಲತಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.


ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ. ಇಷ್ಟು ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ನಿಮ್ಮದೇ ಪಕ್ಷದವರು ಹೇಳುತ್ತಿದ್ದಾರೆ ಎಂಬ ಸೌಜನ್ಯ ತಾಯಿ ಕುಸುಮಾವತಿಯ ಮಾತಿಗೆ ರಾಜ್ಯ ಬಿಜೆಪಿ ನಾಯಕರು ಉತ್ತರ ನೀಡದೆ ಮೌನ ವಹಿಸಿರುವುದನ್ನು ಪ್ರಶ್ನಿಸಿರುವ ಪ್ರಿಯಾಂಕ್‌ಖರ್ಗೆ ವಿಜಯೇಂದ್ರ ಅವರೇ ಮೊದಲು ಸೌಜನ್ಯ ಅವರ ಕುಟುಂಬಕ್ಕೆ ನಿಮ್ಮ ಪಕ್ಷ ನೀಡಿದ ಕಿರುಕುಳಕ್ಕೆ ನ್ಯಾಯ ಸಿಗಬೇಕಲ್ಲವೇ? ಆ ನೊಂದ ಕುಟುಂಬಕ್ಕೆ ಬಿಜೆಪಿ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತರ ಸಿಗಲೇಬೇಕು ಎಂದಿದ್ದಾರೆ.


ಬಿಜೆಪಿ ಯಾರು ಧರ್ಮಸ್ಥಳಕ್ಕೆ ಹೋಗಿದ್ದರೋ ಅವರ ವಿರುದ್ಧವೇ ಕುಸುಮಾವತಿ ಅವರು ದೂರು ಹೇಳಿದ್ದಾರೆ. ಬಿಜೆಪಿಯವರು ಸೌಜನ್ಯ ಪರವೋ ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸುವ ಅಗತವಿದೆ ಎಂದಿದ್ದಾರೆ.


ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕೆಂದಿಲ್ಲ ಬಿಜೆಪಿ ಯಾರಿಂದ ನ್ಯಾಯ ಸಿಗಬೇಕು ಎಂಬುದನ್ನು ಸೌಜನ್ಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ನ್ಯಾಯ ಕೊಡಿಸುವರೇ ಎಂದು ಖರ್ಗೆ ಟ್ವೀಟ್‌ನಲ್ಲಿ ಪ್ರಶ್ನೆ ಹಾಕಿದ್ದಾರೆ.


ಸೌಜನ್ಯ ತಾಯಿಯವರ ಕಾನೂನು ಹೋರಾಟಕ್ಕೆ ಬಿಜೆಪಿ ಪಕ್ಷವೇ ಹಣದ ನೆರವನ್ನು ನೀಡಲಿದೆ ಎಂದು ವಿಜಯೇಂದ್ರ ಘೋಷಿಸಿದ್ದಾರೆ. ಆ ಕಾನೂನು ಹೋರಾಟ ಯಾರ ವಿರುದ್ಧವಾಗಿರುತ್ತದೆ ಎಂಬ ಪ್ರಜ್ಞೆ ಬಿಜೆಪಿಗಿದೆಯೇ ಎಂದು ಪ್ರಶ್ನಿಸಿರುವ ಅವರು, ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದರಲ್ಲಿ ಬಿಜೆಪಿಗೆ ನೈಜ ಬದ್ಧತೆ ಇದ್ದಿದ್ದೇ ಆಗಿದ್ದರೆ ಕುಸುಮಾವತಿ ಅವರ ಮಾತು ಕೇಳಿದ ನಂತರ ಧರ್ಮಸ್ಥಳದಿಂದ ವಾಪಸ್ ಚಲೋ ಕಾರ್ಯಕ್ರಮ ಮಾಡಬೇಕಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.