
ಬೆಂಗಳೂರು,ಮಾ. ೨೯- ರಾಜ್ಯವನ್ನು ಮಾದಕ ವಸ್ತು ಮುಕ್ತ ಮಾಡುವುದು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿಂದು ಮೈಸೂರು ಘಟಕದ ೪೬ನೇ ತಂಡದ ಸಿವಿಲ್ ಪೊಲೀಸ್ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ತರಬೇತಿ ಪೂರ್ಣಗೊಳಿಸಿದ ಎಲ್ಲ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಶುಭ ಹಾರೈಸಿ ಮಾತನಾಡಿದ ಅವರು, ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ತಯಾರಕರು ,ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಮಾದಕ ವಸ್ತುಗಳು ಯುವ ಜನಾಂಗದ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.
ಮಾದಕ ವಸ್ತುಗಳ ಸರಬರಾಜು, ತಯಾರಿಕೆಯನ್ನು ನಿಲ್ಲಿಸಿ, ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸುವುದು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರ ಕಾರ್ಯತತ್ಪರವಾಗಿದೆ. ಪೊಲೀಸರಿಗೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇವೆ ಎಂದು ಹೇಳಿದರು.
ಜನಸ್ನೇಹಿ ಮತ್ತು ಮಾನವೀಯತೆಯಿಂದ ಗುರುತಿಸಿ
ಪೊಲೀಸರು ಸದಾ ಜನಸ್ನೇಹಿಯಾಗಿರಬೇಕು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜತೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು ಎಂದರು.
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಪೊಲೀಸರ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವಂತಾದಾಗ ಮಾತ್ರ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮಗಾಂಧಿ ಅವರು ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದರು.
ಪೊಲೀಸರು ಸರ್ಕಾರದ ಪ್ರತಿನಿಧಿಗಳಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಹೇಳಿದರು.
ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ಎಲ್ಲರಿಗೂ ರಕ್ಷಣೆ ಸಮಾನ ಅವಕಾಶಗಳು ಸಿಗುವಂತ ಕೆಲಸ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳನ್ನಾ ನಿಗ್ರಹಿಸಲು ಸೂಕ್ತ ತರಬೇತಿ ನೀಡಲಾಗುತ್ತಿದ್ದು, ಅವುಗಳನ್ನು ಬಳಕೆ ಮಾಡಿಕೊಂಡು ಸೈಬರ್ ಅಪರಾಧಗಳನ್ನು ನಿಯಂತ್ರಿಸಿ ಎಂದು ಪೊಲೀಸರಿಗೆ ತಾಕೀಯತು ಮಾಡಿದರು.
ಪೊಲೀಸರು ಧೈರ್ಯದಿಂದ ಕೆಲಸ ಮಾಡಬೇಕು. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ಡಾ. ಬ. ಆರ್. ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣ ಬಲದಿಂದ ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪೊಲೀಸರು ಇಂತಹ ಆಮಿಷಗಳಿಗೆ ಒಳಗಾಗದೆ ಧೈರ್ಯದಿಂದ ಕೆಲಸ ಮಾಡಿ ಪೊಲೀಸ್ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಕಿವಿ ಮಾತು ಹೇಳಿದರು. ಗೃಹ ಇಲಾಖೆಯಲ್ಲಿ ಖಾಲಿ ಇರುವ ೮ ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೇನೆ. ಅದನ್ನು ಮಾಡಿಯೇ ತೀರುತ್ತೇನೆ. ಖಾಲಿ ಇದ್ದ ೪೯೧೧ ಪೊಲೀಸ್ ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಇಂದಿನಿಂದ ತರಬೇತಿ ಪೂರ್ಣಗೊಂಡ ೨೭೭ ಸಬ್ ಇನ್ಸ್‌ಪೆಕ್ಟರ್‌ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು
ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ. ಜನರ ರಕ್ಷಣೆ ಕೆಲಸವನ್ನು ಧೈರ್ಯದಿಂದ ಆಮಿಷಕ್ಕೊಳಗಾಗದೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಪೊಲೀಸ್ ಮಹಾನಿರ್ದೇಶಕ ಸಲೀಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





























