Home Lead News ಮಹಿಳಾ ಮೀಸಲಾತಿ ಜಾರಿಗೆ ಸಂಕಲ್ಪ

ಮಹಿಳಾ ಮೀಸಲಾತಿ ಜಾರಿಗೆ ಸಂಕಲ್ಪ

ನವದೆಹಲಿ, ಏ.೧೩- ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿಯನ್ನು ೨೦೨೯ರ ವೇಳೆಗೆ ಜಾರಿಗೆ ತರಬೇಕೆಂಬುದು ಸರ್ವಾನುಮತ ಸಂಕಲ್ಪವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.


ಮಹಿಳಾ ಮೀಸಲಾತಿ ಕಾಯ್ದೆಯನ್ನು ೨೦೨೩ರಲ್ಲೇ ಪರಿಚಯಿಸಿದಾಗ ಎಲ್ಲಾ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಮಹಿಳಾ ಮೀಸಲಾತಿ ಮಸೂದೆಯನ್ನು ಚರ್ಚಿಸಿ ಸುಮಾರು ೪೦ ವರ್ಷಗಳೇ ಕಳೆದಿವೆ. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ಮತ್ತು ತಲೆಮಾರುಗಳಿಂದ ಪ್ರಯತ್ನಗಳನ್ನು ಮಾಡಿವೆ. ಪ್ರತಿಯೊಂದು ಪಕ್ಷವು ಈ ಕಲ್ಪನೆಯನ್ನು ತಮ್ಮದೇ ಆದ ರೀತಿಯಲ್ಲಿ ಮುಂದಿಟ್ಟಿದೆ ಎಂದರು.


ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತದ ಸಮೀಪದಲ್ಲಿದೆ. ಇದು ೨೧ನೇ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಬಹಳ ಖುಷಿಯಿಂದ ಹೇಳುತ್ತಿದ್ದೇನೆ. ಇದು ಮಹಿಳಾ ಶಕ್ತಿಗೆ ಸಮರ್ಪಿತವಾಗಿದೆ ಎಂದು ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆದ ನಾರಿ ಶಕ್ತಿ ವಂದನ ಸಮ್ಮೇಳನದಲ್ಲಿ ಭಾಗವಹಿಸಿದ ಮಾತನಾಡಿದ ಅವರು ಇದೇ ೧೬ ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಹಿಳಾ ಶಕ್ತಿಯ ಆರಾಧನೆಗೆ ಸಮರ್ಪಿತವಾಗಿವೆ ಮತ್ತು ಭವಿಷ್ಯದ ನಿರ್ಣಯ ಈಡೇರಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಕಾನೂನು “ಸಮಾನತೆ, ಸಾಮಾಜಿಕ ನ್ಯಾಯ ಕೇವಲ ಘೋಷಣೆಯಲ್ಲ, ಭಾರತೀಯ ಸಂಸ್ಕೃತಿಯ ನೈಸರ್ಗಿಕ ಭಾಗವಾಗಿದೆ”ಮಹಿಳಾ ಮೀಸಲಾತಿಯ ಮೂಲಕ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ಪಡೆಯುತ್ತಿದೆ. ಯಾರಿಗೂ ಬೋಧಿಸಲು ಅಲ್ಲ, ಮಹಿಳೆಯರನ್ನು ಜಾಗೃತಗೊಳಿಸಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

“ಈ ಬಾರಿಯೂ ಸಹ ಕೆಲಸ ಪರಸ್ಪರ ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ ಆಗಬೇಕೆಂಬುದು ನಮ್ಮ ಪ್ರಯತ್ನ ಮತ್ತು ಬಯಕೆಯಾಗಿದೆ ಎಲ್ಲರ ಸಾಮೂಹಿಕ ಪ್ರಯತ್ನದಿಂದ, ಇಡೀ ಸದನದ ಘನತೆ ಹೊಸ. ಇತಿಹಾಸ ನಿರ್ಮಾಣ ಮಾಡಲಿದೆ ಎನ್ನುವ ಉದ್ದೇಶವಿದೆ ಎಂದಿದ್ದಾರೆ.

ಭಾರತದಲ್ಲಿ ಮಹಿಳೆಯರು ಯಾವುದೇ ಹುದ್ದೆಯನ್ನು ಅಲಂಕರಿಸಿದ್ದರೂ ತಮ್ಮದೇ ಆದ ವಿಶಿಷ್ಟ ಇತಿಹಾಸವನ್ನು ಸೃಷ್ಟಿಸಿದ್ದಾರೆ. ರಾಷ್ಟ್ರಪತಿಯಿಂದ ಹಣಕಾಸು ಸಚಿವರವರೆಗೆ ದೇಶದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶದ ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ ೧.೪ ಮಿಲಿಯನ್‌ಗಿಂತಲೂ ಹೆಚ್ಚು ಮಹಿಳೆಯರು ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಮೀಸಲಾತಿ ನಿರ್ಧಾರದಿಂದ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯು ವ್ಯವಸ್ಥೆಗಳಲ್ಲಿ ಹೆಚ್ಚಿನ ಸಂವೇದನೆ, ಸ್ಪಂದಿಸುವಿಕೆಗೆ ಕಾರಣವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

“ಸುಮಾರು ೨೧ ರಾಜ್ಯಗಳಲ್ಲಿ, ಪಂಚಾಯತ್‌ಗಳಲ್ಲಿ ಅವರ ಭಾಗವಹಿಸುವಿಕೆ ಸುಮಾರು ಶೇಕಡಾ ೫೦ ರಷ್ಟು ತಲುಪಿದೆ. ವಿದೇಶಿ ಅತಿಥಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿದಾಗಲೆಲ್ಲಾ ಅವರು ಮೂಕವಿಸ್ಮಿತರಾಗುತ್ತಾರೆ ಜೊತೆಗೆ ಆಶ್ಚರ್ಯಚಕಿತರಾಗುತ್ತಾರೆ ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ವಿಷಯ ಸಾಮಾನ್ಯ ವಿಷಯವಲ್ಲ. ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಲಕ್ಷಾಂತರ ಮಹಿಳೆಯರ ಈ ಸಕ್ರಿಯ ಭಾಗವಹಿಸುವಿಕೆಯು ವಿಶ್ವದ ಪ್ರಮುಖ ನಾಯಕರು ಮತ್ತು ರಾಜಕೀಯ ತಜ್ಞರಿಗೂ ಸಹ ಬೆರಗುಗೊಳಿಸುತ್ತದೆ ಮತ್ತು ಇದು ಭಾರತಕ್ಕೆ ಅಪಾರ ಹೆಮ್ಮೆ ತರುತ್ತದೆ” ಎಂದು ಅವರು ತಿಳಿಸಿದರು.

ಮೋದಿಯವರ ಇಚ್ಛಾಶಕ್ತಿಯ ಫಲ: ಬಿವೈವಿ


ಮಹಿಳೆಯರಿಗೆ ಶೇ ೩೩ ಮೀಸಲಾತಿ ನೀಡಬೇಕೆಂಬ ತೀರ್ಮಾನವು ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಮಹತ್ವದ ಕ್ಷಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದರು.


ನವದೆಹಲಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಮತ್ತು ಇತರ ಪ್ರಮುಖರ ಉಪಸ್ಥಿತಿಯಲ್ಲಿ ಇಂದು ನಡೆದ ನಾರಿ ಶಕ್ತಿ ವಂದನ ಸಮ್ಮೇಳನದ ನೇರಪ್ರಸಾರವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿ. ಈ ದೇಶದ ನಾರಿಶಕ್ತಿ ಬಗ್ಗೆ ಅಚಲವಾದ ವಿಶ್ವಾಸವನ್ನು ನರೇಂದ್ರ ಮೋದಿಜಿ ಅವರು ಇಟ್ಟುಕೊಂಡಿದ್ದಾರೆ ಎಂದು ನುಡಿದರು. ಮೋದಿಜಿ ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಪಾತ್ರ ಮಹತ್ವವಾದುದು ಎಂಬುದನ್ನು ಈ ದೇಶ ಮಾತ್ರವಲ್ಲದೇ ಜಗತ್ತಿಗೇ ಪ್ರಧಾನಿಯವರು ಸಾರಿ ಸಾರಿ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.


ಭಾರತವು ೨೦೪೭ನೇ ಇಸವಿಗೆ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತನೆ ಹೊಂದಲು ಈ ದೇಶದ ಮಹಿಳೆಯರ ಪಾತ್ರ ಬಹಳ ಮಹತ್ವವಾದುದು. ಹಾಗಾಗಿಯೇ ಈ ದೇಶದ ಮಹಿಳೆಯರ ಹಲವು ದಶಕಗಳ ಕನಸು ಇವತ್ತು ನನಸಾಗುತ್ತಿದೆ ಎಂದು ನುಡಿದರು. ಮಹಿಳಾ ಮೀಸಲಾತಿಯ ಅನುಷ್ಠಾನದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾತ್ರ ಇರುವುದನ್ನು ಪ್ರಧಾನಿಯವರು ಹೇಳಿದ್ದಾಗಿ ವಿವರಿಸಿದರು.


ಮಹಿಳೆಯರಿಗೆ ಶೇ ೩೩ ಮೀಸಲಾತಿ ನೀಡುವ ತೀರ್ಮಾನವು ಮಹತ್ವದ್ದು ಎಂದರು. ಎಲ್ಲರಿಗೂ ಶುಭಹಾರೈಸಿದರು. ಪ್ರಧಾನಿಯವರ ದೃಢಸಂಕಲ್ಪದ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸಬೇಕು ಎಂದು ತಿಳಿಸಿದರು. ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಮತ್ತು ಇತರ ಪ್ರಮುಖರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.