
ಕಮಿಷನ್ ಆರೋಪ
ಬೆಂಗಳೂರು,ಸೆ.೩:ಫಲಾನುಭವಿಗಳಿಂದ ಕಮಿಷನ್ ಕೇಳಿದ ಆರೋಪಕ್ಕೆ ಒಳಗಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಮುಖ್ಯಮಂತ್ರಿಗಳು ಸೂಚಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ತಂದ ಕಾರಣಕ್ಕೆ ಎಐ ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಪಕ್ಷಕ್ಕೆ ಮುಜುಗರವಾಗುವುದನ್ನು ತಡೆಯಲು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ. ಸದ್ಯದಲ್ಲೇ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುವೆ ಎಂದು ಅವರು ಹೇಳಿದರು.
ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಕಮಿಷನ್ ವಿಚಾರವನ್ನೂ ಮಾತನಾಡಿಲ್ಲ. ಎಐ ತಂತ್ರಜ್ಞಾನ ಬಳಸಿ ವೀಡಿಯೋದಲ್ಲಿನ ಸಂಭಾಷಣೆಯನ್ನು ತಿರುಚಲಾಗಿದೆ. ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದರೆ ವಾಸ್ತವ ಗೊತ್ತಾಗುತ್ತದೆ ಎಂದರು.
ಈ ಷಡ್ಯಂತ್ರದಲ್ಲಿ ನಿಗಮದ ಅಧಿಕಾರಿಗಳ ಪಾತ್ರವೂ ಇರಬಹುದು. ರಾಜಕೀಯ ವಿರೋಧಿಗಳು ಈ ಷಡ್ಯಂತ್ರ ಹೆಣೆದಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲವನ್ನೂ ವಿವರಿಸಿ ಇಡೀ ಪ್ರಕರಣದ ತನಿಖೆಗೆ ಮನವಿ ಮಾಡುತ್ತೇನೆ ಎಂದರು.
ನಿಗಮದಲ್ಲಿ ಭ್ರಷ್ಟಾಚಾರ ತಡೆಯಲು ಕ್ರಮಕೈಗೊಂಡಿದೆ. ಅದನ್ನು ಸಹಿಸಲಾರದೆ ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಸಚಿವ ಡಾ. ಎಚ್.ಸಿ ಮಹದೇವಪ್ಪ ಸೇರಿದಂತೆ ಯಾರಿಗೂ ಕಮಿಷನ್ ಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸ್ಪಷ್ಟಪಡಿಸಿದರು.