
ನವದೆಹಲಿ,ಆ.೨೬- ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಮಳೆಯಾಗಿದ್ದು ಮುಂದಿನ ನಾಲ್ಕೈದು ದಿನಗಳ ಕಾಲ ಬಾರಿ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ದೇಶದ ಹಲವು ಭಾಗಗಳಲ್ಲಿಯೂ ಕೂಡ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ೪ ರಿಂದ ೫ ದಿನಗಳವರೆಗೆ ಹಗುರದಿಂದ ಮಧ್ಯಮ ಮಳೆ ಮುಂದುವರಿಯಬಹುದು. ಕೆಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ತಿಳಿಸಿದ್ದು ಈ ನಡುವೆ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಪಂಜಾಬ್‌ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದೆ.
ಗುಡ್ಡಗಾಡು ರಾಜ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಸಾಮಾನ್ಯ ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನದಿಗಳಿಂದ ಭಾರಿ ಪ್ರಮಾಣದ ನೀರು ಹರಿದಿದ್ದು, ಪಂಜಾಬ್‌ನ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.
ನಿರಂತರ ಮಳೆಯಿಂದ ಉಂಟಾದ ಭೂಕುಸಿತಗಳು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಾದ್ಯಂತ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿ ನಿರ್ಬಂಧಿಸಿವೆ. ಭಾರಿ ಮಳೆಯ ಎಚ್ಚರಿಕೆ ಜಾರಿಯಲ್ಲಿದೆ. ಹಿಮಾಚಲ ಪ್ರದೇಶದಲ್ಲಿ, ಪವಿತ್ರ ಮಣಿಮಹೇಶ್ ಯಾತ್ರೆಯಲ್ಲಿದ್ದಾಗ ಆಮ್ಲಜನಕದ ಕೊರತೆಯಿಂದ ಪಂಜಾಬ್‌ನ ಮೂವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಹಡ್ಸರ್ ಮತ್ತು ದಾಲ್ ನಡುವಿನ ಮಾರ್ಗದಲ್ಲಿ ಸುಮಾರು ೮೦೦ ಭಕ್ತರು ಪ್ರಸ್ತುತ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.
ಮಳೆ ಮತ್ತು ಭೂಕುಸಿತದ ಕಾರಣ ಮಣಿಮಹೇಶ್ ಯಾತ್ರೆ ಸ್ಥಗಿತಗೊಂಡಿದೆ. ಮಣಿಮಹೇಶ್ ಯಾತ್ರೆಯನ್ನು ಮತ್ತೆ ಮಳೆ ಮತ್ತು ಭೂಕುಸಿತದ ಕಾರಣ ಸ್ಥಗಿತಗೊಳಿಸಲಾಗಿದೆ ಎಂದು ಭರ್ಮೌರ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಲದೀಪ್ ಸಿಂಗ್ ರಾಣಾ ತಿಳಿಸಿದ್ದಾರೆ.
ಸೆರಾಜ್ ಕಣಿವೆಯ ಮಂಡಿ ಮತ್ತು ಕುಲ್ಲು ಜಿಲ್ಲೆಗಳ ಗಡಿಯಲ್ಲಿರುವ ಬಾಲಿ ಚೌಕಿಯಲ್ಲಿ ಭೂಕುಸಿತ ಸಂಭವಿಸಿದೆ. ಬೆಟ್ಟ ಹಲವಾರು ದಿನಗಳಿಂದ ಕ್ರಮೇಣ ಕುಸಿಯುತ್ತಿತ್ತು, ಇದರಿಂದಾಗಿ ಸುಮಾರು ೯ ಮನೆಗಳು ಮತ್ತು ೧೫ ಅಂಗಡಿಗಳನ್ನು ಮುಂಚಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ನೂರಾರು ಭೂಕುಸಿತಗಳು ಸಂಭವಿಸಿವೆ. ಹೆಚ್ಚುವರಿಯಾಗಿ, ಹಲವಾರು ರಸ್ತೆಗಳು ಮುಚ್ಚಿಹೋಗಿವೆ ಮತ್ತು ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ತೀವ್ರ ಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.