
ಬೆಂಗಳೂರು,ಮಾ. ೯-ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ೨೦೨೪-೨೫ನೇ ಸಾಲಿನಲ್ಲಿ ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕೋ ಲಿಮಿಟೆಡ್, (ಕೆಇಎಲ್) ನಿಂದ ಯಾವುದೇ ಪರಿವರ್ತಕ(ಟ್ರಾನ್ಸ್ ಫಾರ್ಮರ್) ಗಳನ್ನು ಖರೀದಿಸಿರುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮೇಲ್ಮನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ೨೦೨೪-೨೫ನೇ ಸಾಲಿನಲ್ಲಿ ಅವಶ್ಯವಿರುವ ಪರಿವರ್ತಕಗಳನ್ನು ಟೆಂಡರ್ ಮುಖಾಂತರ ಹಾಗೂ ೪ಜಿ ವಿನಾಯಿತಿ ಪಡೆಯಲಾದ ಕವಿಕಾ ಸಂಸ್ಥೆಯಿಂದ ಖರೀದಿಸಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರವಿಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇಂಧನ ಇಲಾಖೆಗೆ ೪ಜಿ ವಿನಾಯಿತಿಗೆ ಅರ್ಜಿ ಸಲ್ಲಿಸುತ್ತಾರೆ. ೪ಜಿ ವಿನಾಯಿತಿ ದೊರೆತ ನಂತರ ಪರಿವರ್ತಕಗಳನ್ನು ಸರಬರಾಜು ಮಾಡಲು ಆದೇಶ ನೀಡುವಂತೆ ಕೋರಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರಗಳನ್ನು ಸಲ್ಲಿಸುತ್ತಾರೆ ಎಂದು ಹೇಳಿದರು.
ವಿದ್ಯುತ್ ಸರಬರಾಜು ಕಂಪನಿಗಳು ಕಾಮಗಾರಿಗಳಿಗೆ ಬೇಕಾಗುವ ಪರಿವರ್ತಕಗಳ ಬೇಡಿಕೆಗನುಗುಣವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಪರಿವರ್ತಕಗಳನ್ನು ಸರಬರಾಜು ಮಾಡಲು ಖರೀದಿ ಆದೇಶ ನೀಡುತ್ತಾರೆ ಎಂದರು.
ಕರ್ನಾಟಕದ ಸಂಸ್ಥೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸರಬರಾಜು ಲಭ್ಯವಿಲ್ಲದ ಕಾರಣ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಕೇರಳದಿಂದ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಇದು ಪ್ರಸ್ತುತ ಸರ್ಕಾರದಲ್ಲೇ ನಡೆದಿರುವ ಕ್ರಮವಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಇದೇ ರೀತಿಯ ಖರೀದಿಗಳು ನಡೆದಿವೆ ಎಂದು ಜಾರ್ಜ್ ಹೇಳಿದರು.
ಟೆಂಡರ್ ಪ್ರಕ್ರಿಯೆಯ ಮೂಲಕವೇ ಟ್ರಾನ್ಸ್‌ಫಾರ್ಮರ್‌ಗಳನ್ನು ಖರೀದಿ ಮಾಡಲಾಗುತ್ತದೆ. ಕರ್ನಾಟಕದ ಸಂಸ್ಥೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸರಬರಾಜು ಲಭ್ಯವಿಲ್ಲದ ಕಾರಣ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಕೇರಳದಿಂದ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಚಿವರು ವಿವರಿಸಿದರು.
ಕವಿಕಾ (ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ) ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು ೧೫ ಸಾವಿರ ಟ್ರಾನ್ಸ್‌ಫಾರ್ಮರ್ ಉತ್ಪಾದನೆ ನಡೆಯುತ್ತಿದ್ದು, ಅದನ್ನು ೩೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಆದರೆ ರಾಜ್ಯದ ಅವಶ್ಯಕತೆ ಸುಮಾರು ೫೦ ಸಾವಿರ ಟ್ರಾನ್ಸ್‌ಫಾರ್ಮರ್‌ಗಳಷ್ಟಿದೆ. ಆದ್ದರಿಂದ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಕಡಿಮೆ ದರದಲ್ಲಿ ಕೇರಳದ ಸಂಸ್ಥೆಯಿಂದ ಟ್ರಾನ್ಸ್‌ಫಾರ್ಮರ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಜಾರ್ಜ್ ಮಾಹಿತಿ ನೀಡಿದರು.
ಇದೇ ವೇಳೆ, ಹಣಕಾಸು ಇಲಾಖೆಯ ಅನುಮತಿ ದೊರೆತರೆ ಮಾತ್ರ ಫೋರ್ ಜಿ ವಿನಾಯಿತಿಯಡಿ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಕೂಡ ಸಚಿವರು ಸ್ಪಷ್ಟಪಡಿಸಿದರು.





























