ಪುಣ್ಯಶೆಟ್ಟಿ ಬಸವನಿಷ್ಠೆ ಗಟ್ಟಿತನದಿಂದ ಕೂಡಿದೆ: ಬಸವಲಿಂಗ ಪಟ್ಟದ್ದೇವರು

ಬೀದರ: ಮಾ.೩:ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿಯವರ ಬಸವನಿಷ್ಠೆ ಗಟ್ಟಿತನದಿಂದ ಕೂಡಿದೆ. ಅವರ ಹೃದಯ ಬಸಿದು ನೋಡಿದರೆ ವಚನಗಳೇ ಕಾಣುತ್ತವೆ ಎಂದು ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಕರ್ನಾಟಕ ಸಾಹಿತ್ಯ ಸಂಘ, ಕುವೆಂಪು ಕನ್ನಡ ಸಂಘದ ಸಹಯೋಗದಲ್ಲಿ ಗಡಿನಾಡ ಚೇತನ ಪಂಚಾಕ್ಷರಿ ಪುಣ್ಯಶೆಟ್ಟಿಯವರ ಅವಲೋಕನ ಆತ್ಮಕಥನ, ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಹಾಗೂ ಬದುಕು ಬರಹ ಕುರಿತು ಸಂಘದ ಸಭಾಂಗಣದಲ್ಲಿ ಆಯೋಜಿಸಿದ ವಿಚಾರ ಸಂಕಿರಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಪುಣ್ಯಶೆಟ್ಟಿಯವರು ಇನ್ನೊಬ್ಬರನ್ನು ಗುರುತಿಸಿ ಬೆಳೆಸಿದ್ದಾರೆ. ಸರಳ, ಸಜ್ಜನಿಕೆ, ಹೆಗಲಿಗೆ ಮಫ್ಲರ್ ಹಾಕಿಕೊಂಡು ಉತ್ಸಾಹದಿಂದ ಸೇವೆಗೈದಿದ್ದಾರೆ. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಸದಾ ನಿರ್ಭಿಡೆಯಿಂದ ಮಾತನಾಡುವ ಅವರು ತಪ್ಪುಗಳೊಂದಿಗೆ ಎಂದಿಗೂ ರಾಜಿಯಾದವರಲ್ಲ. ಭ್ರತ್ಯಾಚಾರ ಮತ್ತು ಗಣಾಚಾರ ಜೀವನದಲ್ಲಿ ಅಳವಡಿಸಿಕೊಂಡ ಅವರ ಅಭಿನಂದನಾ ಗ್ರಂಥ ಆದಷ್ಟು ಬೇಗ ಹೊರಬರಲಿ. ಶತಮಾನೋತ್ಸವದ ಹೊಸ್ತಿಲಲ್ಲಿರುವ ಅವರು ಶತಕ ಬಾರಿಸಲಿ ಎಂದು ಪಟ್ಟದ್ದೇವರು ಶುಭ ಹಾರೈಸಿದರು.
ಪಂಚಾಕ್ಷರಿ ಪುಣ್ಯಶೆಟ್ಟಿ ಸಮಗ್ರ ಸಾಹಿತ್ಯ ಮತ್ತು ಆತ್ಮಕಥನ ಬಿಡುಗಡೆಗೊಳಿಸಿದ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ಮಾತನಾಡುತ್ತ ಶಾಲಾ ಶಿಕ್ಷಕರಾಗಿ ಸೇವೆಗೈದ ಪುಣ್ಯಶೆಟ್ಟಿಯವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಈಜು, ಪಠ್ಯೇತರ ಚಟುವಟಿಕೆ ಹೇಳಿಕೊಟ್ಟಿದ್ದಾರೆ. ವೃತ್ತಿ ಜೀವನದ ಜೊತೆಗೆ ಸಾಹಿತ್ಯದ ಪ್ರವೃತ್ತಿ ಜೀವನ ನಡೆಸಿ ಸಾಹಿತ್ಯ ಲೋಕದಲ್ಲಿ ಮಿಂಚಿದ್ದಾರೆ. ಸಾಧಕರ ಜೀವನದ ಚರಿತ್ರೆಗಳ ಪುಸ್ತಕ ಬರೆಯುವ ಮೂಲಕ ಮೂಲೆಗುಂಪಾದ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ತನಗರಿವಿಲ್ಲದಂತೆ ಬೆಳೆದಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಗ್ರಂಥಗಳು ಹೊರಬರಲಿ. ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಪಂಚಾಕ್ಷರಿ ಪುಣ್ಯಶೆಟ್ಟಿಯವರು ನಮ್ಮೆಲ್ಲರ ಮಾರ್ಗದರ್ಶಕರು. ೯೦ರ ದಶಕದಲ್ಲಿ ಸೈಕಲ್ ತುಳಿಯುತ್ತ ಸಾಹಿತ್ಯ ಸೇವೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯುವಕರಿಗೆ ಸದಾ ಮಾರ್ಗದರ್ಶನ ಮಾಡುತ್ತ, ತಪ್ಪುಗಳ ತಿದ್ದುತ್ತ, ಸಾಹಿತ್ಯಗಳ ತಿದ್ದುಪಡಿ ಮಾಡಿ ನೂರಾರು ಜನರಿಗೆ ಸಾಹಿತ್ಯ ಲೋಕಕ್ಕೆ ಕರೆತಂದ ಹಿರಿಯ ಸಾಹಿತಿಗಳಾಗಿದ್ದಾರೆ ಎಂದು ತಿಳಿಸಿದರು.
ಚಂದ್ರಪ್ಪ ಗೌರಶೆಟ್ಟಿ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಚಂದ್ರಪ್ಪ ಭತಮುರ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆ ಮೇಲೆ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರೆಪ್ಪ ಹೊನ್ನಾ, ಎಸ್.ಬಿ.ಬಿರಾದಾರ, ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ನಾಗಶೆಟ್ಟಿ ಜ್ಯೋತೆಪ್ಪನೋರ್, ಸುನಿತಾ ದಾಡಗೆ, ಡಾ. ಈಶ್ವರಯ್ಯ ಕೂಡಂಬಲ್, ಡಾ. ರಘುಶಂಖ ಭಾತಂಬ್ರಾ, ಡಾ. ಶಿವಲಿಂಗ ಹೆಡೆ ಉಪಸ್ಥಿತರಿದ್ದರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ರಾಷ್ಟಿçÃಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು. ಇದೇ ವೇಳೆ ಡಾ. ರಘುಶಂಖ ಭಾತಂಬ್ರಾ ಸಂಪಾದಿತ ಗಡಿನಾಡ ಚೇತನ ಪಂಚಾಕ್ಷರಿ ಪುಣ್ಯಶೆಟ್ಟಿಯವರ ಅವಲೋಕನ ಆತ್ಮಕಥನ, ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ ಮಾಡಲಾಯಿತು. ಕೊನೆಯಲ್ಲಿ ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸಂಗಮ್ಮ ಪುಣ್ಯಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.