ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದಪ್ರಮುಖ ಆದ್ಯತೆ:ಸಚಿವ ಈಶ್ವರ ಬಿ.ಖಂಡ್ರೆ

ಬೀದರ್:ಮಾ.3: ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಹುಮನಾಬಾದ ಮತಕ್ಷೇತ್ರದ ಚಿಟ್ಟಗುಪ್ಪ ತಾಲ್ಲೂಕಿನ ತಾಳಮಡಗಿ (ಹಿಪ್ಪರ್ಗಾ) ಬಳಿ 16.75 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಂಕೀರ್ಣದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ವಸತಿ ಶಾಲೆಗಳ ಮೂಲಕ ಶೈಕ್ಷಣಿಕ ಸಮಾನತೆ ಸಾಧಿಸಿ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕುವ ಉದ್ದೇಶ ನಮ್ಮದು ಎಂದು ತಿಳಿಸಿದರು. ಈ ಶಾಲಾ ಸಂಕೀರ್ಣವು ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ಮೈಲಿಗಲ್ಲಾಗಲಿದೆ. ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತವೆ. ಇದಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಲು ಬಯಸುವವರು, ತಮ್ಮ ಕ್ಷೇತ್ರದ ಜನತೆಗೆ ಮಾಡುವ ಮಹಾಮೋಸವೆಂಬುದು ಅರ್ಥಮಾಡಿಕೊಳ್ಳಬೇಕು. ಜನರ ಹಿತ, ಮಕ್ಕಳ ಭವಿಷ್ಯ ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ; ಯಾವುದೇ ಅಡ್ಡಿ ಅವಾಂತರಗಳಿಗೂ ಜಗ್ಗದೆ ಅಭಿವೃದ್ಧಿ ಪಥವನ್ನು ಮುಂದುವರಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಚಂದ್ರಶೇಖರ ಬಿ.ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಯೋಗೇಶ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಶಾಂತಯ್ಯ ಮಠಪತಿ ಸೇರಿದಂತೆ ವಸತಿ ಶಾಲಾ ಸಿಬ್ಬಂದಿಗಳು, ಗ್ರಾಮದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.