
ಯಾದಗಿರಿ,ಫೆ.22-ಚುನಾವಣಾ ಭರವಸೆಯಂತೆ ಗೌರವ ಧನವನ್ನು ರೂ.15,000/-ಗೆ ಹೆಚ್ಚಿಸುವುದು ಮತ್ತು ನಿವೃತ್ತಿ ಪರಿಹಾರ ರೂ. 2 ಲಕ್ಷ ನೀಡುವುದು ಸೇರಿದಂತೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಿ 2026-27ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಲು ಆಗ್ರಹಿಸಿ ಫೆ.26 ರಂದು ಬೆಂಗಳೂರಿನಲ್ಲಿ ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದಿಂದ ಅಂಗನವಾಡಿ ನೌಕರರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಇಲಾಖೆಯ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿ ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನವನ್ನು ರೂ.15,000/-ಗೆ ಹೆಚ್ಚಿಸುವುದು ಮತ್ತು ನಿವೃತ್ತಿ ಪರಿಹಾರ ರೂ. 2 ಲಕ್ಷ ನೀಡುವುದರ ಕುರಿತು 2026-27ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಬೇಕು, ಸುಪ್ರೀಂಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರ್ಯಾಚೂಟಿ (ಉಪ ಧನ) ಹಣ ನಿವೃತ್ತಿಯಾದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಬೇಕು. ಈಗಿರುವ ನಿಬರ್ಂಧಗಳನ್ನು ತೆಗೆದು ಹಾಕಬೇಕು, ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎನ್ನುವ ಅಂಗನವಾಡಿ ನೌಕರರ ಬಹುದಿನಗಳ ಬೇಡಿಕೆಯನ್ನು ಎತ್ತಿ ಹಿಡಿದಿರುವ ಗುಜರಾತ್ ಹೈಕೋರ್ಟ್ ನ ಆದೇಶದಂತೆ, ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ನಿಧಿಯಿಂದ ಅವರ ವಿವಿಧ ಗಂಭೀರ ಕಾಯಿಲೆಗಳ ಚಿಕಿತ್ಸೆಗಳಿಗೆ ನೀಡುತ್ತಿರುವ ವೈದ್ಯಕೀಯ ವೆಚ್ಚಗಳ ಸಹಾಯ ಧನ ಕನಿಷ್ಟ ರೂ.2 ಲಕ್ಷ ಗಳಿಗೆ ಹೆಚ್ಚಿಸಬೇಕು. ಫಲಾನುಭವಿಗಳಿಗೆ ಸುಲಭವಾಗಿ ಪಾವತಿಸಲು ಸೂಕ್ತ ಕ್ರಮ ವಹಿಸಬೇಕು, ಈಗಾಗಲೇ ನಿವೃತ್ತಿಯಾದ ನೌಕರರಿಗೆ ರೂ.50,000 ಮತ್ತು ರೂ.30,000 ನಿವೃತ್ತಿ ಪರಿಹಾರ ಹಣ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಬೇಕು ಮತ್ತು ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು. ಅಲ್ಲಿಯವರೆಗೂ ನಿವೃತ್ತಿ ಪರಿಹಾರ ಇಡುಗಂಟು ರೂ.5ಲಕ್ಷಗಳಿಗೆ ನಿಗದಿ ಮಾಡಬೇಕು, ಸೇವಾ ಹಿರಿತನವನ್ನು ಆಧರಿಸಿ 50% ಮತ್ತು ಮೆರಿಟ್ ಆಧರಿಸಿ 50% ಮೇಲಿನ ಹುದ್ದೆಗೆ ಮುಂಬಡ್ತಿಗೆ ಆದೇಶ ಮಾಡಬೇಕು, ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ನೀಡಬಾರದು ಎನ್ನುವ ಆದೇಶವನ್ನು ಎಲ್ಲಾ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಬೇಕು ಮತ್ತು ಈಗ ಮಾಡುತ್ತಿರುವ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆ ಮಾಡಬೇಕು, ಪ್ರತಿ ತಿಂಗಳು 5ನೇ ತಾರಿಖಿನ ಒಳಗಾಗಿ, ಮಾಸಿಕ ವೇತನ (ಗೌರವ ಧನ) ಪಾವತಿ ಮಾಡಬೇಕು, ಮಾತೃ ವಂದನಾ, ಬಾಗ್ಯಲಕ್ಷ್ಮೀ ಕೆಲಸಗಳಿಗೆ ಹೆಚ್ಚುವರಿ ಗೌರವ ಧನವನ್ನು ನಿಡಬೇಕು, ಬೆಲೆ ಏರಿಕೆಯ ಇಂದಿನ ದರದಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆ ದರ, ಮೊಟ್ಟೆ ದರ, ಸಾದಿಲ್ವಾರು, ಫ್ಲೆಕ್ಸಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು ಮತ್ತು ಹಲವಾರು ತಿಂಗಳುಗಳ ಬಾಕಿ ಹಣ ಪಾವತಿ ಮಾಡಬೇಕು ಮತ್ತು ಪ್ರತಿ ತಿಂಗಳು ಸಕಾಲದಲ್ಲಿ ಇವುಗಳಿಗೆ ಹಣ ಬಿಡುಗಡೆ ಮಾಡಬೇಕು, ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಇಂಟರ್ನೆಟ್ ಸಂಪರ್ಕ ಸಹಿತ ಉತ್ತಮ ಗುಣಮಟ್ಟದ ಮೊಬೈಲ್ ಸೆಟ್ ಗಳು, ಶುದ್ಧ ಕುಡಿಯುವ ನೀರು, ಶೌಚಾಲಯ ಸಹಿತ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಅಂಗನವಾಡಿ ಕೇಂದ್ರಗಳಿಗೆ ಪ್ರತಿ ವರ್ಷಕ್ಕೆ ನಿಗದಿಪಡಿಸಿದ ಸಂಖ್ಯೆಯ ಸಿಲೆಂಡರ್ ಗಳನ್ನು ಕೆಲವು ಜಿಲ್ಲೆ ಗಳಲ್ಲಿ ನೀಡುತ್ತಿಲ್ಲ. ನಿಗದಿಪಡಿಸಿದ ಸಂಖ್ಯೆಯ ಸಿಲಿಂಡರ್ ನೀಡಲು ಕ್ರಮ ಕೈಗೊಳ್ಳಬೇಕು, ಅಂಗನವಾಡಿ ಕೇಂದ್ರಗಳಿಗೆ ಇನ್ ಚಾರ್ಜ್ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆಗಳನ್ನು ಪರಿಗಣಿಸಿ ಅವುಗಳನ್ನು ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.



























