
ಕಲಬುರಗಿ;ಅ.18: ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಅವರ ಅಸಂಖ್ಯಾತ ಭಕ್ತರಿಗೆ ಮಾತ್ರವಲ್ಲದೆ, ರಾಷ್ಟ್ರಕ್ಕೂ ತುಂಬಲಾರದ ನಷ್ಟ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು ತಿಳಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ಬರೆದ ಸಂತಾಪ ಪತ್ರದಲ್ಲಿ, ಡಾ. ಅಪ್ಪಾಜಿ ಅವರು ಸಂಸ್ಥಾನದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವಾ ಚಟುವಟಿಕೆಗಳ ವಿಸ್ತರಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಮಾರ್ಗದರ್ಶನವು ಪ್ರದೇಶದಾದ್ಯಂತ ಅಸಂಖ್ಯಾತ ಜನರ ಜೀವನವನ್ನು ಸುಧಾರಿಸಿದೆ. ಅವರು ಭಕ್ತಿ, ಪ್ರೀತಿ ಮತ್ತು ನಮ್ರತೆಯ ಹಾದಿಯಲ್ಲಿ ತಮ್ಮ ಜೀವನವನ್ನು ಸವೆಸಿದ್ದಾರೆಂದು ಪ್ರಧಾನಿ ತಿಳಿಸಿದ್ದಾರೆ.
ಪೂಜ್ಯ ಡಾ. ಅಪ್ಪಾಜಿ ಅವರನ್ನು ಆಧ್ಯಾತ್ಮಿಕ ಬುದ್ಧಿವಂತಿಕೆ ಮತ್ತು ಜ್ಞಾನದ ಪ್ರಾಯೋಗಿಕ ಅಂಶಗಳನ್ನು ಒತ್ತಿಹೇಳಿದ ಆಧ್ಯಾತ್ಮಿಕ ಮಾರ್ಗದರ್ಶಕ ಎಂದು ಶ್ರೀ ಮೋದಿ ಬಣ್ಣಿಸಿದ್ದಾರೆ. ನಿಜವಾದ ಆಧ್ಯಾತ್ಮಿಕತೆಯು “ಸೇವಾ ಪರಮೋ ಧರ್ಮ”ದ ಆದರ್ಶವನ್ನು ಮೈಗೂಡಿಸಿಕೊಂಡು ಹೇಗೆ ಬದುಕ ಬಹುದೆಂದು ಡಾ. ಅಪ್ಪಾಜಿ ತೋರಿಸಿದ್ದಾರೆ. ಡಾ. ಅಪ್ಪಾಜಿ ಅವರು ಸಮಾಜದ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಸೇವೆ ಸಲ್ಲಿಸಿ, ಅವರು ಜೀವನದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಧೃಡಗೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು. ಬಹುಖ್ಯಾತಿಯ ಲೇಖಕರಾಗಿ, ಡಾ. ಅಪ್ಪಾಜಿ ಸಂಪ್ರದಾಯಗಳು ಮತ್ತು ತತ್ವಶಾಸ್ತ್ರದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಹಾಗೂ ಅವರ “ದಾಸೋಹ ಸೂತ್ರಗಳು” ನಂತಹ ಕೃತಿಗಳು ಭವಿಷ್ಯದ ಪೀಳಿಗೆಗೆ ಯಾವಾಗಲೂ ಮಾರ್ಗದರ್ಶಕ ಬೆಳಕಾಗಿ ಉಳಿಯುತ್ತವೆ ಎಂದಿದ್ದಾರೆ.
ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕನ್ನಡ ಸಾಹಿತ್ಯ, ಸಂಸ್ಕøತಿ ಮತ್ತು ಕಲೆಯನ್ನು ಉತ್ತೇಜಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡಾ. ಅಪ್ಪಾಜಿ ಅವರ ಶಾಶ್ವತ ಕೊಡುಗೆಯನ್ನು ಜನರು ಯಾವಾಗಲೂ ಪ್ರೀತಿಯಿಂದ ಸ್ಮರಿಸುತ್ತಾರೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. “ಡಾ. ಅಪ್ಪಾಜಿ ಅವರ ಜೀವನ ಮತ್ತು ಮೌಲ್ಯಗಳು ಮಾನವೀಯತೆಯನ್ನು ಶಾಶ್ವತವಾಗಿ ಪ್ರೇರೇಪಿಸುತ್ತಲೇ ಇರುತ್ತವೆ” ಎಂದು ಪ್ರಧಾನಿ ಡಾ. ಅಪ್ಪಾಜಿ ಅವರ ಕುಟುಂಬ ಮತ್ತು ಅವರ ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಸಂತಾಪ ಪತ್ರದಲ್ಲಿ ತಿಳಿಸಿರುವರು.