
ವಿಶಾಖಪಟ್ಟಣ. ಏ.೩- ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಜಗತ್ತೇ ಬೆರಗುಗಣ್ಣಿನಿಂದ ನೋಡುವಂತೆ ಮಾಡುವ ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ ಮೂರನೇ ಸ್ವದೇಶಿ ನಿರ್ಮಿತ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ’ಐಎನ್‌ಎಸ್ ಅರಿದಮನ್’ ಶೀಘ್ರದಲ್ಲೇ ನೌಕಾಪಡೆಗೆ ಸೇರ್ಪಡೆಗೊಳ್ಳುವ ಸೂಚನೆ ಸಿಕ್ಕಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅದೃಶ್ಯ ಶಕ್ತಿಯಂತಿರುವ ’ಅರಿದಮನ್’ ಅನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಇದು ಕೇವಲ ಒಂದು ಪದವಲ್ಲ, ಇದು ಶಕ್ತಿಯ ಸಂಕೇತ. ’ಅರಿದಮನ್’” ಎಂದು ಬರೆಯುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ನೌಕಾಬಲಕ್ಕೆ ಹೊಸ ಆಯಾಮ: ಏನಿದರ ವಿಶೇಷತೆ
ಐಎನ್‌ಎಸ್ ಅರಿದಮನ್ ಭಾರತದ ಗುಪ್ತ ಕಾರ್ಯಯೋಜನೆಯಡಿ ನಿರ್ಮಾಣವಾದ ಮೂರನೇ ಪರಮಾಣು ಜಲಾಂತರ್ಗಾಮಿ. ಇದು ಈ ಹಿಂದೆ ಸೇರ್ಪಡೆಯಾದ ಐಎನ್‌ಎಸ್ ಅರಿಹಂತ್ (೨೦೧೬) ಮತ್ತು ಐಎನ್‌ಎಸ್ ಅರಿಘಾಟ್ (೨೦೨೪) ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
ಇದು ಎಂಟು ಲಂಬ ಉಡಾವಣಾ ಟ್ಯೂಬ್‌ಗಳನ್ನು ಹೊಂದಿದ್ದು, ಅರಿಹಂತ್‌ಗಿಂತ ದುಪ್ಪಟ್ಟು ಸಾಮರ್ಥ್ಯ ಹೊಂದಿದೆ. ಇದರಿಂದ ೩,೫೦೦ ಕಿ.ಮೀ ದೂರದ ಗುರಿ ತಲುಪುವ ಎಂಟು ಏ-೪ ಕ್ಷಿಪಣಿಗಳನ್ನು ಅಥವಾ ೭೫೦ ಕಿ.ಮೀ ವ್ಯಾಪ್ತಿಯ ೨೪ ಏ-೧೫ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ.
ಭಾಭಾ ಪರಮಾಣು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದ ಸುಧಾರಿತ ೮೩ ಮೆಗಾವ್ಯಾಟ್ ಸಾಮರ್ಥ್ಯದ ’ಪ್ರೆಶರೈಸ್ಡ್ ವಾಟರ್ ರಿಯಾಕ್ಟರ್’ ಮೂಲಕ ಇದು ಕಾರ್ಯನಿರ್ವಹಿಸಲಿದೆ.
ಅದೃಶ್ಯ ನಡೆ: ಸುಮಾರು ೭,೦೦೦ ಟನ್ ತೂಕವಿರುವ ಈ ನೌಕೆಯು ಸಮುದ್ರದಾಳದಲ್ಲಿ ಅತ್ಯಂತ ನಿಶ್ಯಬ್ದವಾಗಿ ಚಲಿಸುವ ತಂತ್ರಜ್ಞಾನ ಹೊಂದಿದ್ದು, ಶತ್ರು ರಾಷ್ಟ್ರಗಳ ರೇಡಾರ್‌ಗಳಿಗೆ ಸಿಲುಕುವುದು ಕಷ್ಟ.
’ತಾರಗಿರಿ’ ಯುದ್ಧನೌಕೆಯೂ ಸಿದ್ಧ
ಇದೇ ವೇಳೆ ರಾಜನಾಥ್ ಸಿಂಗ್ ಅವರು ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ’ಐಎನ್‌ಎಸ್ ತಾರಗಿರಿ’ ಅನ್ನು ಸಹ ನೌಕಾಪಡೆಗೆ ಹಸ್ತಾಂತರಿಸಲಿದ್ದಾರೆ. ಶೇ. ೭೫ಕ್ಕಿಂತ ಹೆಚ್ಚು ಸ್ವದೇಶಿ ಉಪಕರಣಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದ್ದು, ಬ್ರಹ್ಮೋಸ್ ಕ್ಷಿಪಣಿಗಳಂತಹ ಮಾರಕ ಶಸ್ತ್ರಾಸ್ತ್ರಗಳನ್ನು ಇದು ಹೊತ್ತೊಯ್ಯಲಿದೆ.
ಶತ್ರುಗಳ ಮೊದಲ ದಾಳಿಯ ನಂತರವೂ ತಿರುಗೇಟು ನೀಡುವ ಭಾರತದ ಪರಮಾಣು ನೀತಿಗೆ ಈ ಜಲಾಂತರ್ಗಾಮಿಗಳು ಬೆನ್ನೆಲುಬಾಗಲಿವೆ. ಸಾಗರದಾಳದಲ್ಲಿ ಅಡಗಿರುವ ಅರಿದಮನ್, ಭಾರತದ ರಕ್ಷಣಾ ಕವಚವಾಗಿ ಕೆಲಸ ಮಾಡಲಿದೆ.”
ರಕ್ಷಣಾ ತಜ್ಞರು
ಭಾರತವು ಈಗ ಒಟ್ಟು ನಾಲ್ಕು ಪರಮಾಣು ಜಲಾಂತರ್ಗಾಮಿಗಳನ್ನು ಹೊಂದುವ ಗುರಿ ಹೊಂದಿದ್ದು, ಆ ಮೂಲಕ ಸಮುದ್ರದಲ್ಲಿ ಸದಾ ಒಂದು ಪರಮಾಣು ಸಜ್ಜಿತ ನೌಕೆಯು ಗಸ್ತಿನಲ್ಲಿ ಇರುವಂತೆ ನೋಡಿಕೊಳ್ಳಲಿದೆ. ಇದು ಚೀನಾ ಮತ್ತು ಪಾಕಿಸ್ತಾನದಂತಹ ನೆರೆ ರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಪ್ರಬಲ ಸಂದೇಶವಾಗಿದೆ.























