ದಂಡ ಪಾವತಿಸದ ಬಡ ಕೈದಿಗಳಿಗೆ ದಾನಿಗಳಿಂದ ಹಣ ಪಾವತಿಸಿ ಜೈಲಿನಿಂದ ಬಿಡುಗಡೆ

ಕಲಬುರಗಿ:ಜು.09: ದಂಡದ ಹಣ ಪಾವತಿಸದೇ ಕಾರಾಗೃಹದಲ್ಲಿಯೇ ಉಳಿದ ಮೂವರು ಬಂದಿಗಳಿಗೆ ಮಾನವೀಯತೆ ಮೇರೆಗೆ ವಿವಿಧ ಸಾಮಾಜಿಕ ಸಂಸ್ಥೆಗಳು ಹಣ ಪಾವತಿಸಿ ಜೈಲಿನಿಂದ ಬಿಡುಗಡೆಗೊಳಿಸಿದ ಘಟನೆ ಮಂಗಳವಾರ ವರದಿಯಾಗಿದೆ.
ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿಗಳಾದ ಶಿಕ್ಷಾ ಬಂದಿಗಳಾದ ಸುಭಾಷ ತಂದೆ ಶಿವರಾಯ್ ನಾಟೀಕರ್, ಶ್ರೀಕಾಂತ್ ಅಲಿಯಾಸ್ ಚಿನ್ನು ತಂದೆ ಅಶೋಕ್, ಶರಣಪ್ಪ ತಂದೆ ನರಸಪ್ಪ ಈರಟ್ ಅವರು ದಂಡದ ಹಣ ಕಟ್ಟಲು ಅರ್ಥಿಕವಾಗಿ ದುರ್ಬಲರಾದ ಕಾರಣ ಬಿಡುಗಡೆಗೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ.
ಆ ಕುರಿತು ಸಂಸ್ಥೆಯ ಮುಖ್ಯಸ್ಥೆ ಡಾ. ಅನಿತಾ ಆರ್., ಅವರ ಗಮನಿಸಿ ಸ್ಥಳೀಯ ಸಂಸ್ಥೆಗಳಾದ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಿಸನ್ ಮಿನಸ್ಟರಿ ಆಫ್ ಇಂಡಿಯಾ ಸಂಸ್ಥೆಯವರನ್ನು ಸಂಪರ್ಕಿಸಿ ಅವರಿಂದ ನೆರವು ಪಡೆದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಮೂವರು ಕೈದಿಗಳಿಗೆ ತಲಾ ಹತ್ತು ಸಾವಿರ ರೂ.ಗಳ ಮೊತ್ತವನ್ನು ಸಾಮಾಜಿಕ ಸಂಸ್ಥೆಗಳು ಪಾವತಿಸಿದವು. ನೆರವು ನೀಡಿದ ಸಂಸ್ಥೆಗಳ ಕುರಿತು ಜೈಲಿನ ಮುಖ್ಯಸ್ಥೆ ಡಾ. ಅನಿತಾ ಅವರು ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಹಣ ಪಾವತಿಸುವ ಸಂದರ್ಭದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಾರ್, ಜೈಲರ್‍ಗಳಾದ ಶ್ರೀಮತಿ ಸುನಂದಾ ವಿ., ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್ ಹಾಗೂ ಶಿಕ್ಷಕ ನಾಗರಾಜ್ ಮೂಲಗೆ ಅವರು ಉಪಸ್ಥಿತರಿದ್ದರು.