
೨೫೦೦ ಪೋಲಿಸರ ನಿಯೋಜನೆ
ಬೆಂಗಳೂರು,ಮಾ.೨೮- ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅಖಾಡ ಸಜ್ಜಾಗಿದ್ದು, ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಳೆದ ವರ್ಷ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿ ಭೀಕರ ಕಾಲ್ತುಳಿತ ಬಳಿಕ ಮತ್ತೆ ನಗರದಲ್ಲಿ ಕ್ರಿಕೆಟ್ ರಂಗೇರಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ದುರಂತದಿಂದ ಎಚ್ಚೆತ್ತಿರುವ ಬೆಂಗಳೂರು ಪೊಲೀಸರು, ಈ ಸಲ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
೨,೫೦೦ ಪೊಲೀಸ್ ಭದ್ರತೆ:
ಮೊದಲ ಪಂದ್ಯದಲ್ಲಿ ಆರ್‌ಸಿಬಿ vs ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಟೂರ್ನಿ ಇದಾಗಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಭದ್ರತೆಗೆ ೨.೫೦೦ ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪೈಕಿ ೭ ಸ್ಪೆಷಲ್ ಸ್ಕ್ವಾಡ್‌ಗಳನ್ನು ರಚನೆ ಮಾಡಲಾಗಿದೆ.
ಪಶ್ಚಿಮ ವಯಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ಈಗಾಗಲೇ ಭದ್ರತೆ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಇಂದು ಮಧ್ಯಾಹ್ನದಿಂದ ಪೊಲೀಸರು ನಿಯೋಜಿತ ಸ್ಥಳಗಳಲ್ಲಿ ಬಂದೋಬಸ್ತ್ ನೀಡಲಿದ್ದಾರೆ.
ಈ ನಡುವೆ ಐಪಿಎಲ್ ಪಂದ್ಯಾವಳಿಗಳು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕೆಎಸ್ ಸಿಎ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸುರಕ್ಷತೆ ಕುರಿತಾಗಿ ಸುದೀರ್ಘ ಸಭೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು.
ಕ್ರಿಕೆಟ್ ಪ್ರೇಮಿಗಳ ಸುರಕ್ಷತೆಗೆ ಕ್ರೀಡಾಂಗಣದ ಒಳಗೆ ಮತ್ತು ಕ್ರೀಡಾಂಗಣದ ಸುತ್ತ ರೂಪಿಸಿರುವ ಭದ್ರತಾ ವ್ಯವಸ್ಥೆ, ನಗರದ ಸಂಚಾರ ವ್ಯವಸ್ಥೆಯಲ್ಲಿ ಮಾಡಿಕೊಳ್ಳಲಾಗಿರುವ ಬದಲಾವಣೆಗಳು, ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾಂಗಣದ ಒಳಗೆ ಕುಡಿಯುವ ನೀರು ಸೇರಿದಂತೆ ಇತರ ಅತ್ಯಾವಶ್ಯಕ ಸಂಗತಿಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಮೆಟ್ರೋ ರೈಲಿನ ಮೇಲೆ ಬೀಳುವ ಪ್ರಯಾಣಿಕರ ಸಾಂದ್ರತೆ, ಮೆಟ್ರೋ ಸಂಚರಿಸುವ ವೇಳಾಪಟ್ಟಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಡಿಕೊಳ್ಳಲಾಗಿರುವ ಹೆಚ್ಚುವರಿ ಭದ್ರತೆ, ಸುರಕ್ಷತೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಣ್ಣ ಅಹಿತಕರ ಘಟನೆಗೂ ಅವಕಾಶ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನು ನೀಡಿದರು.
ಪಂದ್ಯಾವಳಿ ಆಯೋಜನೆಗೆ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತು ಎಚ್ಚರಿಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಸೂಚನೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳು ಹೈ ಅಲರ್ಟ್ ಆಗಿರಬೇಕು. ಆಯಾ ಕ್ಷಣದ ಮಾಹಿತಿಗಳನ್ನು ಮೇಲಿನ ಅಧಿಕಾರಿಗಳಿಗೆ ನಿಯಮಿತವಾಗಿ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಸೂಚನೆಗಳನ್ನು ನೀಡಿದರು.
ರಸ್ತೆಗೆ ಬಂದು ನಿಂತರೆ ಎಚ್ಚರ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ೩ ಹಂತದ ಸೆಕ್ಯುರಿಟಿ ಇರಲಿದೆ. ಆರ್‌ಎಎಫ್ ಮತ್ತು ಗರುಡ ಟೀಂ,ಪಿಕಪ್ ಸ್ಕ್ವಾಡ್ ಇದೆ. ಭದ್ರತೆಗೆ ೨,೫೦೦ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆಫ್‌ಲೈನ್ ಟಿಕೆಟ್ ಸಿಗುತ್ತೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ ಅವಕಾಶ ನೀಡಲ್ಲ. ಟಿಕೆಟ್ ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಪಂದ್ಯವನ್ನು ನೋಡಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
೭೪ ಪಂದ್ಯಗಳು
ಈ ಬಾರಿ ಟೂರ್ನಿ ೨ ತಿಂಗಳಿಗೂ ಹೆಚ್ಚು ಕಾಲ ಇರಲಿದ್ದು, ಮೇ ೨೪ರವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದೆ. ಮೇ ೩೧ ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ ೧೦ ತಂಡಗಳು ಸೆಣಸಲಿದ್ದು, ಟೂರ್ನಿಯಲ್ಲಿ ಒಟ್ಟು ೬೫ ದಿನಗಳ ಕಾಲ ೭೪ ಪಂದ್ಯಗಳು ನಡೆಯಲಿವೆ.






























