
ಬೆಂಗಳೂರು, ಮಾ.೪: ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನಿಖರ ಮಾಹಿತಿ ಇಲ್ಲದೆ ಆರೋಪ ಮಾಡಬಾರದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಹೇಳುವವರು ಯಾರು ಎಂಬುದೇ ಗೊತ್ತಿಲ್ಲ. ಯಾರ ಫೋನ್ ಟ್ಯಾಪ್ ಆಗಿದೆ ಎಂಬುದನ್ನು ಸ್ಪಷ್ಟವಾಗಿ ಹೆಸರಿನೊಂದಿಗೆ ಹೇಳಬೇಕು. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ರೀತಿಯ ಹೇಳಿಕೆಗಳು ಸರಿಯಲ್ಲ. ರಾಜ್ಯದಲ್ಲಿ ಯಾವುದೇ ಫೋನ್ ಟ್ಯಾಪಿಂಗ್ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಹಾಗೂ ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ” ಎಂದರು.
ಮುಖ್ಯಮಂತ್ರಿಗೆ ‘ಸಾಲರಾಮಯ್ಯ’ ಎಂಬ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಸಾಲ ಪ್ರಮಾಣ ನಿಗದಿತ ಮಿತಿಯೊಳಗೇ ಇದೆ ಎಂದು ಹೇಳಿದರು.‘ರಾಜ್ಯದ ಸಾಲವು ೨೫ ಶೇಕಡಾ ಮಿತಿಯೊಳಗಿದೆ. ಇತರ ರಾಜ್ಯಗಳಿಗಿಂತ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ದಕ್ಷಿಣ ರಾಜ್ಯಗಳ ಪೈಕಿ ನಮ್ಮ ರಾಜ್ಯದಲ್ಲೇ ಕಡಿಮೆ ಸಾಲವಿದೆ. ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ಹೆಚ್ಚಿನ ಸಾಲ ಪಡೆದಿವೆ. ನಾವು ನಿಯಮದಡಿ ಆರ್ಥಿಕ ನಿರ್ವಹಣೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಭೇಟಿ ಕುರಿತು ಮಾತನಾಡಿದ ಅವರು, “ನಿನ್ನೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರಗಳು ಹಾಗೂ ತುಮಕೂರು ಜಿಲ್ಲೆಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ” ಎಂದರು.
ಇರಾನ್ ಧಾರ್ಮಿಕ ನಾಯಕ ಅಯತೊಲ್ಲಾ ಖಮೇನಿ ನಿಧನ ಹಿನ್ನೆಲೆ ನಡೆದ ಮೆರವಣಿಗೆ ಕುರಿತು ಮಾತನಾಡಿದ ಗೃಹ ಸಚಿವರು, “ಕೆಲವರು ಅವರನ್ನು ಗುರುಗಳಾಗಿ ಭಾವಿಸಿ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ ಎಲ್ಲವೂ ದೇಶದ ಕಾನೂನಿನಡಿ ನಡೆಯಬೇಕು. ಮೆರವಣಿಗೆಗೆ ಯಾವುದೇ ಅನುಮತಿ ಕೇಳಲಾಗಿರಲಿಲ್ಲ. ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅನುಮತಿ ಇಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿದ್ದು, ಕಾನೂನು ಪಾಲನೆ ಎಲ್ಲರಿಗೂ ಕಡ್ಡಾಯ ಎಂದು ಅವರು ಎಚ್ಚರಿಸಿದರು.
ಕೆಪಿಎಸ್‌ಸಿ ವಿರುದ್ಧದ ದೂರುಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಬಹಳ ವರ್ಷಗಳಿಂದ ದೂರುಗಳು ಬರುತ್ತಿವೆ. ತಪ್ಪುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಸುಮಾರು ೫೬ ಸಾವಿರ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದ್ದು, ಕೆಲವು ಕೆಇಎ ಹಾಗೂ ಕೆಲವು ಕೆಪಿಎಸ್‌ಸಿ ಮೂಲಕ ನಡೆಯಲಿವೆ. ನೇಮಕಾತಿ ನ್ಯಾಯಯುತವಾಗಿ ನಡೆಯಬೇಕು” ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ ಕುರಿತು ಮಾತನಾಡಿದ ಅವರು, ಒಳ ಮೀಸಲಾತಿ ಗೊಂದಲದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಎಡಗೈ ಸಮುದಾಯದ ನಾಯಕರ ಅಸಮಾಧಾನ ಹಿನ್ನೆಲೆ ಈ ಮಾತುಕತೆ ನಡೆದಿದೆ ಎಂದರು.
ದಕ್ಷಿಣ ರಾಜ್ಯಗಳಿಗೆ ಅನ್ಯಾಯ: ಸಿಎಂ ಪತ್ರ
ತಮಿಳುನಾಡು ಮುಖ್ಯಮಂತ್ರಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ, “ಜಿಎಸ್‌ಟಿ ಪಾಲು ಹಾಗೂ ಕೇಂದ್ರ ಯೋಜನೆಗಳಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಪ್ರಮುಖ ಯೋಜನೆಗಳನ್ನು ಉತ್ತರ ಭಾರತಕ್ಕೆ ನೀಡಲಾಗುತ್ತಿದೆ. ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ” ಎಂದು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ಆರಂಭ ವಿಚಾರವಾಗಿ, “ಜಸ್ಟಿಸ್ ಕುನ್ಹಾ ಸಮಿತಿ ಹಾಗೂ ಮಹೇಶ್ವರ್ ರಾವ್ ನೇತೃತ್ವದ ಸಮಿತಿಗಳ ವರದಿ ಆಧಾರದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಮೂಲಸೌಕರ್ಯ ಸುಧಾರಣೆ ಕಾರ್ಯ ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆ ಬಲಪಡಿಸಲಾಗಿದೆ. ಪಂದ್ಯಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಡಿಸಿಎಂ ಡಿನ್ನರ್ ಮೀಟಿಂಗ್ ಹಾಗೂ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಸಭೆಗಳು ಸಾಮಾನ್ಯ. ನಾಯಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಊಟಕ್ಕೆ ಆಹ್ವಾನಿಸುತ್ತಾರೆ. ಇದರಲ್ಲಿ ತಪ್ಪೇನಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದೀರ್ಘಕಾಲ ನಿರ್ವಹಿಸುವುದು ಸುಲಭವಲ್ಲ. ಎಲ್ಲರ ಸಹಕಾರದಿಂದಲೇ ಅದು ಸಾಧ್ಯ” ಎಂದು ಹೇಳಿದರು.























