
ಬೆಂಗಳೂರು,ಫೆ.೧೧-ಮಾನಸಿಕ ಅಸ್ವಸ್ಥ ಮಗನೊಬ್ಬ ಹೆತ್ತ ತಂದೆ ತಾಯಿ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಅಮಾನುಷ ಘಟನೆ ಇಂದು ಬೆಳಿಗ್ಗೆ ಹೆಚ್ ಎಎಲ್ ನ ದೊಡ್ಡ ನಕ್ಕುಂದಿಯ ವಿಜ್ಞಾನನಗರದಲ್ಲಿ ನಡೆದಿದೆ.
ವಿಜ್ಞಾನನಗರದ ಸಾಫ್ಟ್‌ವೇರ್ ಉದ್ಯೋಗಿ ನವೀನ್ ಚಂದ್ರ ಹಾಗೂ ಶಾಮಲಾ ದಂಪತಿಯನ್ನು ಪುತ್ರ ರೋಹನ್ ಚಂದ್ರ ಕೊಲೆ ಮಾಡಿದ್ದು ಆತನನ್ನು ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂ ೧೧೨ಕ್ಕೆ ಬಂದ ಮಾಹಿತಿಯನ್ನು ಆಧರಿಸಿ ತಕ್ಷಣವೇ ಸ್ಥಳಕ್ಕೆ ಹೆಚ್‌ಎಎಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದಾಗ ನವೀನ್ ಚಂದ್ರ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟರೆ, ತಾಯಿ ಶಾಮಲಾ ನೆಲಕ್ಕೆ ಬಿದ್ದು ತೀವ್ರತರವಾದ ತಲೆಗೆ ಗಾಯ ಸಂಭವಿಸಿ ಮೃತಪಟ್ಟಿದ್ದಾರೆ.
ಕೊಲೆಯಾದ ನವೀನ್ ಚಂದ್ರ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಅವರ ಪತ್ನಿ ಶಾಮಲಾ ಗೃಹಿಣಿಯಾಗಿದ್ದರು, ಪತ್ನಿ ಮಗನ ಜೊತೆ ನವೀನ್ ಚಂದ್ರ ಹಲವು ವರ್ಷಗಳಿಂದ ವಿಜ್ಞಾನ ನಗರದಲ್ಲಿ ವಾಸವಾಗಿದ್ದರು.
ಕೃತ್ಯ ನಡೆಸಿದ ಪುತ್ರ ರೋಹನ್ ಚಂದ್ರ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಾಗಿರುವುದು ಕಂಡು ಬಂದಿದೆ ಆದರೆ ತೀವ್ರ ವಿಚಾರಣೆಯ ನಂತರವೇ ನಿಜ ಸಂಗತಿ ತಿಳಿಯುತ್ತದೆ ಎಂದು ತಿಳಿಸಿದರು.
ಎಚ್‌ಎಎಲ್ ಪೊಲೀಸರು ಜೋಡಿ ಕೊಲೆ ಪ್ರಕರಣವನ್ನು ದಾಖಲಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು























