
ವಾಷಿಂಗ್ಟನ್, ಮಾ.೭: ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡೆನ್ ಹತ್ಯೆಗೆ ಇರಾನ್ ಜತೆ ಸಂಚು ರೂಪಿಸಿದ ಸಂಬಂಧ ಪಾಕಿಸ್ತಾನ ವ್ಯಕ್ತಿಗೆ ಅಮೆರಿಕದಲ್ಲಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಆಸಿಫ್ ಮರ್ಚೆಂಟ್ (೪೭) ಎಂದು ಗುರುತಿಸಲಾಗಿದೆ.
ಈತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಸುಪಾರಿ ಹಂತಕರನ್ನು ಹುಡುಕುವಾಗ ಆಸಿಫ್ ಅರಿವಿಲ್ಲದೆ ಏಜೆಂಟ್‌ಗಳನ್ನು ಸಂಪರ್ಕಿಸಿದ್ದ. ಇದಾದ ನಂತರ ಆತನ ಯೋಜನೆ ವಿಫಲವಾಗಿತ್ತು.
ಒಂದು ವಾರದ ವಿಚಾರಣೆಯ ನಂತರ ಬ್ರೂಕ್ಲಿನ್‌ನಲ್ಲಿರುವ ನ್ಯಾಯಾಲಯ ಆಸಿಫ್ ಮರ್ಚೆಂಟ್‌ನನ್ನು ಭಯೋತ್ಪಾದನೆ ಮತ್ತು ಸುಪಾರಿ ಕೊಲೆ ಆರೋಪಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಿತ್ತು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಸಾಕ್ಷ್ಯಗಳ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಗಿನ ಅಧ್ಯಕ್ಷ ಜೋ ಬೈಡೆನ್ ಮತ್ತು ೨೦೨೪ರ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾಜಿ ವಿಶ್ವಸಂಸ್ಥೆಯ ರಾಯಭಾರಿ ನಿಕ್ಕಿ ಹ್ಯಾಲಿಯವರನ್ನು ಆರೋಪಿ ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.

























