ಸಿಂಧೂರಕ್ಕೆ ಪಾಕ್ ತತ್ತರ

ನವದೆಹಲಿ,ಅ.೨೦- ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಮೂರು ಸೇನಾ ಪಡೆಗಳ ಹೊಡೆತಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿತ್ತು. ನಮ್ಮ ಸೇನೆಯನ್ನು ಎದುರಿಸಲಾಗಿದೆ ಪಾಕ್ ಶರಣಾಗತಿಗೆ ಮೊರೆಯಿಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಲಾಗಿದೆ ಎಂದ ಅವರು ಸೇನಾ ಪಡೆಗಳ ಅದ್ಭುತ ಶೌರ್ಯ ಮತ್ತು ದೃಢಸಂಕಲ್ಪವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.


ಬೆಳಕಿನ ಹಬ್ಬ ದೀಪಾವಳಿ ಶುಭ ಸಂದರ್ಭದಲ್ಲಿ ಗೋವಾ ರಾಜಧಾನಿ ಪಣಜಿಯಲ್ಲಿ ಐಎನ್‌ಎಸ್ ವಿಕ್ರಾಂತ್‌ನಲ್ಲಿ ನೌಕಾ ಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧ ನೌಕೆಯಲ್ಲ. ೨೧ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಹಾಗೂ ಬದ್ಧತೆಗೆ ಸಾಕ್ಷಿಯೆಂದು ಮೋದಿ ಹೇಳಿದರು. ಐಎನ್‌ಎಸ್ ವಿಕ್ರಾಂತ್ ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಆತ್ಮನಿರ್ಭರ ಭಾರತದ ಅತ್ಯುನ್ನತ ಸಂಕೇತವು ಆಗಿದೆ ಎಂದು ವಿಶ್ಲೇಷಿಸಿದರು.


ಐಎನ್‌ಎಸ್ ವಿಕ್ರಾಂತ್‌ನಲ್ಲಿ ನಿನ್ನೆ ಕಳೆದ ರಾತ್ರಿಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ನಿಮ್ಮಲ್ಲಿರುವ ಆಗಾಧ ಶಕ್ತಿ ಮತ್ತು ಉತ್ಸಾಹವನ್ನು ಕಂಡಿದೆ. ನೀವು ದೇಶ ಭಕ್ತಿಗೀತೆಗಳನ್ನು ಹಾಡುವುದನ್ನು ನೋಡಿದಾಗ ನಿಮ್ಮ ಹಾಡುಗಳಲ್ಲಿ ಆಪರೇಷನ್ ಸಿಂಧೂರ ನೆನಪಾಗುತ್ತದೆ ಎಂದು ಹೇಳಿದರು.


ಯುದ್ಧ ಭೂಮಿಯಲ್ಲಿ ನಿಂತಿರುವ ಯೋಧರ ಅನುಭವನ್ನು ಯಾವುದೇ ಪದಗಳಲ್ಲಿ ಸಂಪೂರ್ಣವಾಗಿ ಸಾಧ್ಯವಿಲ್ಲ ಎಂಬುದು ತಮ್ಮ ಅರಿವಿಗೆ ಬಂದಿದೆ. ಹೀಗಾಗಿ ದೀಪಾವಳಿಯನ್ನು ನಿಮ್ಮೊಂದಿಗೆ ಕಳೆದಿದ್ದು ತುಂಬಾ ವಿಶೇಷವಾಗಿದೆ ಎಂದು ಬಣ್ಣಿಸಿದರು.


ಭಾರತವನ್ನು ವಿಶ್ವದ ಪ್ರಮುಖ ರಕ್ಷಣಾ ರಫ್ತುದಾರರ ಪೈಕಿ ಒಂದನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ೨೦೧೪ ರಿಂದ ಇದುವರೆಗೂ ೪೦ಕ್ಕೂ ಹೆಚ್ಚು ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನಿರ್ಮಿಸಿದ್ದೇವೆ ಎಂದರು.
ಬ್ರಹ್ಮೋಸ್ ಕ್ಷಿಪಣಿ ಹೆಸರು ಕೇಳಿದರೆ ಕೆಲವರ ಹೆಸರುಗಳಲ್ಲಿ ನಡುಕ ಉಂಟು ಮಾಡುತ್ತದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷ ತಿರುಗೇಟು ನೀಡಿದರು. ಪಾಕ್ ವಿರುದ್ಧ ಪ್ರಯೋಗಿಸಲಾದ ಬ್ರಹ್ಮೋಸ್ ಕ್ಷಿಪಣಿಗೆ ಅನೇಕ ದೇಶಗಳು ಖರೀದಿಸಲು ಉತ್ಸುಕವಾಗಿದೆ ಎಂದು ಹೇಳಿದರು.

ಸ್ವದೇಶಿ ಉತ್ಪಾದನೆಗೆ ಒತ್ತು


ಕಳೆದ ದಶಕದಲ್ಲಿ, ಭಾರತದ ರಕ್ಷಣಾ ವಲಯ ಸ್ವದೇಶಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಕಳೆದ ೧೧ ವರ್ಷಗಳಲ್ಲಿ ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದೆ, ಸರಿಸುಮಾರು ಪ್ರತಿ ೪೦ ದಿನಗಳಿಗೊಮ್ಮೆ ನೌಕಾಪಡೆಗೆ ಹೊಸ ಯುದ್ಧನೌಕೆ ಅಥವಾ ಜಲಾಂತರ್ಗಾಮಿ ಸೇರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಬ್ರಹ್ಮೋಸ್ ಕ್ಷಿಪಣಿಗೆ ಜಾಗತಿಕ ಬೇಡಿಕೆ ಹೆಚ್ಚಿಸಿದೆ, ಭಾರತವು ಶೀಘ್ರದಲ್ಲೇ ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಸ್ಥಾನ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೂಪಾಂತರದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಅವರು ಸ್ಟಾರ್ಟ್‌ಅಪ್‌ಗಳು ಮತ್ತು ಸ್ಥಳೀಯ ರಕ್ಷಣಾ ಘಟಕಗಳನ್ನು ಶ್ಲಾಘಿಸಿದ ಅವರು ಹೊಸ ಪೀಳಿಗೆಯ ಭರವಸೆಯನ್ನು ದೇಶದ ಶಕ್ತಿ ಎಂದಿದ್ದಾರೆ.

ನಕ್ಸಲ್ ಮುಕ್ತ ಭಾರತ

ಸೇನಾಪಡೆಗಳ ಶೌರ್ಯ ಮತ್ತು ದೃಢಸಂಕಲ್ಪದಿಂದ ದೇಶವನ್ನು ನಕ್ಸಲ್ ಮುಕ್ತಗೊಳಿಸಲು ದಾಪುಗಾಲು ಇಟ್ಟಿದ್ದೇವೆ. ನಕ್ಸಲ್ ಹಿಂಸಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಮೈಲಿಗಲ್ಲನ್ನು ದೇಶ ಸಾಧಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಲ್ಲಿ ೧೨೫ ಜಿಲ್ಲೆಗಳು ನಕ್ಸಲರ ಕಪಿಮುಷ್ಠಿಯಲ್ಲಿದ್ದವು. ನಕ್ಸಲ್ ನಿಗ್ರಹ ಕಾರ್ಯಾಚರಣೆಯಿಂದ ಈ ಸಂಖ್ಯೆ ಈಗ ೧೧ ಜಿಲ್ಲೆಗಳಿಗೆ ಇಳಿದಿದೆ. ಶೇ. ೯೦ ರಷ್ಟು ಯಶಸ್ಸು ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ನಕ್ಸಲ್ ಹಿಂಸಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ವಿಶ್ವಾಸ ತಮ್ಮದಾಗಿದೆ ಎಂದರು.