ಫೆ.22 ರಿಂದ ನಗರದಲ್ಲಿ ಪದ್ಮಗಂಧಿ ಚಿತ್ರ ಪ್ರದರ್ಶನ

ಕಲಬುರಗಿ,ಫೆ.14: ಭಾರತೀಯ ಸಂಸ್ಕøತಿ ಮತ್ತು ಕಲೆಯ ಪ್ರಮುಖ ಸಂಕೇತವಾದ ಕಮಲದ ಹೂವಿನ ಮಹತ್ವವನ್ನು ಸಾರುವ ವಿಶಿಷ್ಟ ಸಿನಿಮಾ ಪದ್ಮಗಂಧಿ ಚಲನಚಿತ್ರವು ಫೆ 22 ರಿಂದ ನಗರದ ಶೆಟ್ಟಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.ಸಂಸ್ಕøತ ವಿದ್ವಾಂಸರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರೊ. ಎಸ್. ಆರ್. ಲೀಲಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ, ಖ್ಯಾತ ಚಲನಚಿತ್ರ ಮತ್ತು ರಂಗಭೂಮಿ ನಟ ಕೆ. ಸುಚೇಂದ್ರ ಪ್ರಸಾದ್ ಅವರು ಇಂದು ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕಮಲದ ಹೂವಿನ ಬಗ್ಗೆ ಆಕರ್ಷಿತಳಾಗಿ, ಅದರ ಆಧ್ಯಾತ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಔಷಧೀಯ ಮಹತ್ವವನ್ನು ಅನ್ವೇಷಿಸುವ ಕಥೆಯನ್ನು ಇದು ಒಳಗೊಂಡಿದೆ.ಇದು ಕನ್ನಡದ ಜೊತೆಗೆ ಸಂಸ್ಕøತ ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಿದ್ದು ಇಂಗ್ಲೀಷ್ ಸಬ್ ಟೈಟಲ್ ಒಳಗೊಂಡಿದೆ. 2 ಗಂಟೆ 5 ನಿಮಿಷ ಅವಧಿಯ ಚಿತ್ರ ಇದಾಗಿದೆ.
ಶತವಧಾನಿ ಗಣೇಶ,ಪರಿಪೂರ್ಣ ಚಂದ್ರಶೇಖರ್, ಜಿ. ಎಲ್. ಭಟ್, ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ ಮತ್ತು ಡಾ. ಗೌರಿ ಸುಬ್ರಹ್ಮಣ್ಯ ಮೊದಲಾದ ವಿದ್ವಾಂಸರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ
ಈ ಚಿತ್ರವು ಕಮಲದ ಹೂವಿಗೂ ಮತ್ತು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣಗಳಿಗೂ ಇರುವ ಸಾಂಕೇತಿಕ ಸಂಬಂಧವನ್ನು ಸಹ ಎತ್ತಿ ತೋರಿಸುತ್ತದೆ.ಅನೇಕ ವಿದ್ವಾಂಸರು, ಮಠಾಧೀಶರು ಚಿತ್ರವನ್ನು ವೀಕ್ಷಿಸಿ ಪ್ರಶಂಸಿದ್ದಾರೆ.ಈ ಚಲನಚಿತ್ರ ಇಂಡೋ-ದುಬೈ ಚಲನಚಿತ್ರ ಉತ್ಸವದಲ್ಲಿ ಉತ್ತಮ ಚಿತ್ರ ಪ್ರಶಂಸೆಗೆ ಪಾತ್ರವಾಗಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ.ಒಂದು ದೃಶ್ಯವೂ ಕಡಿತಗೊಳ್ಳದೇ ಸೆನ್ಸಾರ್ ಪ್ರಮಾಣಪತ್ರ ಪಡದುಕೊಂಡಿದೆ.ಇದು ಜ್ಞಾನಾರ್ಜನೆಗಾಗಿ ಮಾಡಿದ ಚಿತ್ರ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ದೇಗಾಂವ, ಎಂ.ಎಸ್ ಪಾಟೀಲ ನರಿಬೋಳ,ಲಕ್ಷ್ಮೀಕಾಂತ ಸ್ವಾಧಿ,ಸಂತೋಷ ಅವರು ಸೇರಿದಂತೆ ಹಲವರಿದ್ದರು.