ಹಾಡು, ಭಜನೆ, ಮಿಮಿಕ್ರಿ ಮಾಡಿ ರಾತ್ರಿಯಿಡಿ ಸದನದಲ್ಲೇ ಕಳೆದ ವಿಪಕ್ಷ ಸದಸ್ಯರು

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರುಗಳು ವಿಧಾನಸಭೆ ಅಧಿವೇಶನದ ಕೊಠಡಿಯಲ್ಲಿ ಅಹೋರಾತ್ರಿ ಧರಣಿ ನಡೆಸಿ, ಭಜನೆ ನಡೆಸಿದರು.

ಬೆಂಗಳೂರು, ಫೆ. ೪- ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿರುವ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರುಗಳು ಇಡೀ ರಾತ್ರಿ ಸದನದಲ್ಲೇ ಮಲಗಿದ್ದು, ಹಾಡು, ಭಜನೆ, ಮಿಮಿಕ್ರಿಗಳನ್ನು ಮಾಡಿ, ನಿದ್ರೆಗೆ ಜಾರಿದರು.


ಅಬಕಾರಿ ಇಲಾಖೆಯಲ್ಲಿ ೬ ಸಾವಿರ ಕೋಟಿ ರೂ. ಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಚಿವ ಆರ್.ಬಿ.ತಿಮ್ಮಾಪುರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಿನ್ನೆ ಆಗ್ರಹಿಸಿತ್ತು. ಆದರೆ, ಸಚಿವ ತಿಮ್ಮಾಪುರ ಅವರು ನಾನು ರಾಜೀನಾಮೆ ನೀಡಲ್ಲ. ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದ್ದರು.

ಇದು ಪ್ರತಿಪಕ್ಷ ಆಡಳಿತ ಪಕ್ಷದ ಜಟಾಪಟಿಗೆ ಕಾರಣವಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿ ಅದರಂತೆ ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ಸದಸ್ಯರುಗಳ ನಿನ್ನೆ ಇಡೀ ದಿನ ಸದನದಲ್ಲೇ ಮಲಗಿ ಪ್ರತಿಭಟನೆ ನಡೆಸಿ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು ಎಂದು ಘೋಷಿಸಿದರು.


ನಿನ್ನೆ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರುಗಳಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಊಟ ಉಪಚಾರ, ಮಲಗಲು ಹಾಸಿಗೆ ದಿಂಬುಗಳನ್ನು ವಿಧಾನಸಭಾ ಸಚಿವಾಲಯದಿಂದ ಒದಗಿಸಲಾಗಿತ್ತು. ಹಾಗೆಯೇ ನಿನ್ನೆ ರಾತ್ರಿ ಸದನಕ್ಕೆ ಬಂದ ವಿಪಕ್ಷ ಸದಸ್ಯರ ಜತೆ ಉಭಯ ಕುಶಲೋಪರಿ ನಡೆಸಿ ಅವರ ಕ್ಷೇಮವನ್ನು ವಿಚಾರಿಸಿದರು.


ಭಜನೆ-ಹಾಡು-ತಮಟೆ-ಡೋಲು
ನಿನ್ನೆ ರಾತ್ರಿ ಸದನದಲ್ಲೇ ಉಳಿದಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿದ್ರೆಗೂ ಮೊದಲು ಪ್ರತಿ ಪಕ್ಷದ ಮೊಗಸಾಲೆ ವಿಧಾನಸಭೆಯ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಹಾಡು, ಭಜನೆಗಳನ್ನು ಹಾಡಿದರು.


ಡೋಲು-ತಬಲ- ಕಿಲಕಿಗಳನ್ನು ಹಿಡಿದ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುತ್ತಾ ಕಾಲ ಕಳೆದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲೇ ಭಜನೆ ಹಾಡು ಹಾಡಿದ ವಿಪಕ್ಷ ಸದಸ್ಯರು ವಿಧಾನಸಭೆಯ ಮೊದಲನೇ ಮಹಡಿಯಲ್ಲಿ ಡೋಲು-ತಬಲ ಬಾರಿಸುತ್ತಾ ಹಾಡು ಹೇಳುತ್ತಾ ಕೆಲ ಕಾಲ ನಡೆದಾಡಿದರು. ನಂತರ ಮತ್ತೆ ಸದನದ ಒಳಗೆ ಬಂದು ಭಜನೆಗಳನ್ನು ಹಾಡು ಹಾಸ್ಯ ಚಟಾಕಿ ಹಾರಿಸಿ ಮಿಮಿಕ್ರಿ ಮಾಡಿ ನಿಧಾನವಾಗಿ ನಿದ್ರೆಗೆ ಜಾರಿದರು.


ಬಿಜೆಪಿಯ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ಭಜನೆಗಳನ್ನು ಶಾಸಕರುಗಳಿಗೆ ಹೇಳಿಕೊಟ್ಟರು. ಅವರು ಹೇಳಿದಂತೆ ಉಳಿದ ಶಾಸಕರು ಹೇಳಿದರು.
ಈ ಭಜನೆ ಸಂದರ್ಭದಲ್ಲಿ ಡೋಲು, ತಬಲ, ಕಿಲಕಿಗಳನ್ನು ಬಿಜೆಪಿ ಸದಸ್ಯರು ಬಾರಿಸಿದರು.


ಬೆಳಗ್ಗೆ ವಾಕಿಂಗ್

ರಾತ್ರಿ ಇಡೀ ಸದನದಲ್ಲೇ ಮಲಗಿದ್ದ ಬಿಜೆಪಿ- ಜೆಡಿಎಸ್ ಸದಸ್ಯರು ಬೆಳಗಾಗುತ್ತಿದ್ದಂತೆಯೇ ಎದ್ದು ವಿಧಾನಸೌಧದ ಸುತ್ತ ವಾಯು ವಿಹಾರ ನಡೆಸಿ ನಂತರ ಶಾಸಕರುಗಳ ಭವನಗಳಿಗೆ ತೆರಳಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ನಂತರ ವಿಧಾನಸಭೆ ಆರಂಭವಾಗುವುದರೊಳಗೆ ಸದನಕ್ಕೆ ಹಾಜರಾದರು.