ಕಾರ್ಖಾನೆಯಲ್ಲಿ ಸ್ಫೋಟ ಘಟನೆ ಒಂಭತ್ತು ಜನರ ಬಂಧನ

ನಾಗ್ಪುರ ,ಮಾ.೨-ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.


ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೦೫ ರ ಅಡಿಯಲ್ಲಿ ಎಸ್‌ಬಿಎಲ್ ಎನರ್ಜಿ ಲಿಮಿಟೆಡ್‌ನ ೨೧ ನಿರ್ದೇಶಕರು ಮತ್ತು ಷೇರುದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಲ್ಲಿಯವರೆಗೆ ಒಂಬತ್ತು ನಿರ್ದೇಶಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಟೋಲ್ ತಾಲ್ಲೂಕಿನಲ್ಲಿರುವ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಾರ್ಖಾನೆ ’ಎಸ್‌ಬಿಎಲ್ ಎನರ್ಜಿ ಲಿಮಿಟೆಡ್’ ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ೧೮ ಕಾರ್ಮಿಕರು ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ ಮತ್ತು ೨೪ ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ.


ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಮತ್ತು ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯ (ಡಿಐಎಸ್‌ಎಚ್) ಸಲ್ಲಿಸಿದ ಪ್ರಾಥಮಿಕ ವರದಿಯು ಸುರಕ್ಷತಾ ಲೋಪಗಳನ್ನು ಕಂಡುಹಿಡಿದಿದೆ ಎಂದು ನಾಗುರಾ ಗ್ರಾಮೀಣ ಪೊಲೀಸ್ ಅಧೀಕ್ಷಕ ಹರ್ಷ ಪೊದ್ದಾರ್ ಹೇಳಿದ್ದಾರೆ.