ನೈಜೀರಿಯಾ ಪ್ರಜೆಗಳ ಸೆರೆ: ೫.೫೦ ಕೋಟಿ ಡ್ರಗ್ಸ್ ವಶ

ಬೆಂಗಳೂರು,ಅ.೨೩-ಡ್ರಗ್ಸ್ ಸಾಗಾಣೆ,ಶೇಖರಣೆ ಮಾರಾಟ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಇಬ್ಬರು ನೈಜೀರಿಯಾ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೫.೫೦ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ನೈಜೀರಿಯಾದ ಡುರೋ ಮೈಕಲ್ ಹಾಗೂ ಇಬು ಸ್ಯಾಮುಯೆಲ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ೪೨,೮೦೦ ನಗದು ೧ ಕೆಜಿ ೪೭ ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ೩ ಕೆ.ಜಿ ಹೈಡ್ರೋಗಾಂಜಾ ಸೇರಿ ೫.೫೦ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


ಹೆಬ್ಬಗೋಡಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.


ಬಂಧಿತ ಆರೋಪಿಗಳು ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದು, ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.


ಬಂಧಿತರಿಂದ ೧ ಕೆ.ಜಿ ೪೭ ಗ್ರಾಂ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟೆಲ್ ಮತ್ತು ಡ್ರಗ್‌ಪೆಡ್ಲಿಂಗ್‌ನಲ್ಲಿ ಸಂಪಾದನೆ ಮಾಡಿದ್ದ ೪೨,೮೦೦ ನಗದು ಸೇರಿ ೨.೫೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು, ಕಸ್ಟಂಮ್ಸ್ ಇಲಾಖೆಯ ಅಧಿಕಾರಿಗಳಿಂದ ಖಚಿತ ಮಾಹಿತಿ ಆಧರಿಸಿ ಕೆಜಿ ನಗರದ ವಿದೇಶಿ ಅಂಚೆ ಕಛೇರಿಗೆ ವಿದೇಶಿ ಮೂಲದಿಂದ ನಿಷೇಧಿತ ಮಾದಕ ವಸ್ತುಗಳಿರುವ ಅನುಮಾನಾಸ್ಪದ ಪಾರ್ಸೆಲ್‌ಗಳು ಬಂದಿದ್ದವು.


ಈ ಮಾಹಿತಿಯ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್ ಪೆಕ್ಟರ್ ರಕ್ಷಿತ್.ಎ.ಕೆ ಮತ್ತವರ ಸಿಬ್ಬಂದಿ ಶ್ವಾನದಳದ ಸಹಾಯದೊಂದಿಗೆ ಸ್ಥಳಕ್ಕೆ ದಾವಿಸಿ ದಾಳಿ ಮಾಡಿ, ಅನುಮಾನಾಸ್ಪದ ಪಾರ್ಸೆಲ್‌ಗಳು ಪರಿಶೀಲಿಸಿ ಅದರಲ್ಲಿದ್ದ ೩ ಕೋಟಿ ಮೌಲ್ಯದ ೩ ಕೆಜಿ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.


ವಿದೇಶಿ ಕಂಪನಿಗಳ ಬಿಸ್ಕೆಟ್, ಚಾಕೊಲೇಟ್ ಪ್ಯಾಕೇಟ್‌ಗಳಲ್ಲಿ ಡ್ರಗ್ಸ್‌ನ್ನು ಮರೆಮಾಚಿ ಥೈಲ್ಯಾಂಡ್ ದೇಶಗಳಿಂದ ಅಮದು ಮಾಡಿಕೊಂಡಿರುವುದು ಕಂಡುಬಂದಿದೆ.


ಇದರ ವಿರುದ್ಧ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬನ್ನೋತ್, ವಂಶಿಕೃಷ್ಣ ಅವರಿದ್ದರು.