ಎನ್‌ಐಎ ಕಾರ್ಯಾಚರಣೆ ಶಂಕಿತ ಉಗ್ರ ಸೆರೆ

ಬೆಂಗಳೂರು,ಫೆ.೨೧-ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಅರ್ಷಾದ್ ಖಾನ್‌ನನ್ನು ರಾಷ್ಟ್ರೀಯ ತನಿಖಾ ದಳ( ಎನ್‌ಐಎ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಗ್ರೆನೇಡ್ ಪ್ರಕರಣದ ಕಿಂಗ್‌ಪಿನ್ ಶಂಕಿತ ಉಗ್ರ ಅರ್ಷಾದ್ ಖಾನ್ ಬಂಧಿತ ಆರೋಪಿಯಾಗಿದ್ದು,ಆತನನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ನಗರದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದ ಗಂಭೀರ ಆರೋಪದ ಮೇಲೆ ಈತನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದರು.
ಪ್ರಕರಣದ ತೀವ್ರತೆಯನ್ನು ಪರಿಗಣಿಸಿ, ತನಿಖೆಯನ್ನು ನಂತರ ಎನ್‌ಐಎ ಗೆ ವರ್ಗಾಯಿಸಲಾಗಿತ್ತು.


ಗ್ರೆನೇಡ್ ಪ್ರಕರಣದಲ್ಲಿ ಜೈಲು ಸೇರಿದ್ದ ಅರ್ಷಾದ್ ಖಾನ್, ಕೆಲವು ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಆದರೆ, ಜಾಮೀನು ದೊರೆತ ಬಳಿಕ ನಿಯಮದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.


ಈತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು ಸತತ ಹುಡುಕಾಟ ನಡೆಸುತ್ತಿದ್ದರು,ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ, ಎನ್‌ಐಎ ವಿಶೇಷ ನ್ಯಾಯಾಲಯವು ಅರ್ಷಾದ್ ಖಾನ್ ವಿರುದ್ಧ ವಾರೆಂಟ್ ಮತ್ತು ಪ್ರಕ್ಲೋಮೇಷನ್ (ಘೋಷಿತ ಅಪರಾಧಿ) ಆದೇಶ ಹೊರಡಿಸಿತ್ತು. ನ್ಯಾಯಾಲಯದ ಈ ಕಠಿಣ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎನ್‌ಐಎ ತಂಡ, ಇಂದು ಆತನನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


ಕೋರ್ಟ್ ಗೆ ಹಾಜರು:


ಬಂಧಿತ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಇಂದು ನಗರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಲೆಮರೆಸಿಕೊಂಡ ಅವಧಿಯಲ್ಲಿ ಈತ ಯಾರ ಸಂಪರ್ಕದಲ್ಲಿದ್ದ ಮತ್ತು ಮತ್ತೆ ಯಾವುದಾದರೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೇ ಎಂಬ ಬಗ್ಗೆ ಎನ್ ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.