Home Lead News ಸಂಘರ್ಷ ಅಂತ್ಯಕ್ಕೆ ಸಂಧಾನ

ಸಂಘರ್ಷ ಅಂತ್ಯಕ್ಕೆ ಸಂಧಾನ

ಇಸ್ಲಮಾಬಾದ್, ಏ.೧೧- ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ೪೦ ದಿನಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಸಂಘರ್ಷವನ್ನು ಶಾಶ್ವತವಾಗಿ ಕೊನೆಗಾಣಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮದ್ಯಸ್ಥಿಕೆಯಲ್ಲಿ ಅಮೆರಿಕ- ಇರಾನ್ ನಡುವೆ “ಇsಸ್ಲಾಮಾಬಾದ್ ಮಾತುಕತೆ”ಗೆ ಉಭಯ ದೇಶಗಳ ನಿಯೋಗ ಇಸ್ಲಾಮಾಬಾದ್‌ಗೆ ಆಗಮಿಸಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.


ಇಸ್ಲಾಮಾಬಾದ್‌ನಲ್ಲಿ ಮಾತುಕತೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.


ಅಮೆರಿಕ- ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಇರಾನ್ ಬೆಂಬಲಿತ ಲೆಬನಾನ್‌ನ ಹಿಬ್ಜುಲ್ಲಾ ಸಂಘಟನೆ ಮೇಲೆ ಇಸ್ರೇಲ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ತಕ್ಷಣ ಲೆಬನಾನ್ ಮೇಲಿನ ದಾಳಿ ನಿಲ್ಲಿಸಬೇಕು ಎಂದು ಇರಾನ್ ಪಟ್ಟು ಹಿಡಿದಿದೆ, ಇಸ್ರೇಲ್ ನಡೆಯ ಮೇಲೆ ಇಸ್ಲಾಮಾಬಾದ್ ಮಾತುಕತೆಯ ಫಲಪ್ರಧ ನಿಂತಿದೆ. ಮಾತುಕತೆಯ ಕಡೆ ಇಡೀ ಜಗತ್ತಿನ ಚಿತ್ತ ಕೇಂದ್ರೀಕೃತವಾಗಿದೆ.


ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಶಮನದ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಇರಾನ್ ನಿಯೋಗ ಇಸ್ಲಾಮಾಬಾದ್‌ಗೆ ಬಂದಿಳಿದಿದೆ, ನಿಯೋಗದಲ್ಲಿ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಫ್ಟಿ ಇದ್ದಾರೆ.


ಇರಾನ್‌ನ ನಿಯೋಗವನ್ನು ಪಾಕ್‌ನ ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್ ದರ್, ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಅಯಾಜ್ ಸಾದಿಕ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಸೈಯದ್ ಮೊಲ್ಸನ್ ರಜಾ ನಖಿ ಅವರು ಬರಮಾಡಿಕೊಂಡರು ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.


ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಪಾಕಿಸ್ತಾನ ತಲುಪಿದೆ ಜೆ.ಡಿ. ವ್ಯಾನ್ಸ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಮಾತುಕತೆ ವೇಳೆ ಟ್ರಂಪ್ ಸೂಚನೆಗಳ ಬಗ್ಗೆ ವ್ಯಾನ್ಸ್ ಮನವರಿಕೆ ಮಾಡಿಕೊಡಲಿದ್ದಾರೆ.


ಎರಡೂ ದೇಶಗಳ ನಿಯೋಗಗಳು ರಚನಾತ್ಮಕ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂಬ ಭರವಸೆ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಇಶಾಕ್ ದರ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನೆರವು ನೀಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.


ಲೆಬೆನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಇರಾನಿಯನ್ನರ ಭೇಟಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೊ?ಹಗಳು ಹರಿದಾಡುತ್ತಿರುವ ನಡುವೆಯೇ ನಿಯೋಗ ಇಸ್ಲಾಮಾಬಾದ್‌ಗೆ ತೆರಳಿದೆ.


ಇರಾನ್, ಕದನ ವಿರಾಮ ಒಪ್ಪಂದದಲ್ಲಿ ಒಪ್ಪಿಕೊಂಡ ಷರತ್ತುಗಳನ್ನು ಪೂರೈಸಿದರೆ ನಿಯೋಗ ಮಾತುಕತೆಗಳಲ್ಲಿ ಭಾಗವಹಿಸುತ್ತದೆ ಎಂದು ಇರಾನಿನ ಮಾಧ್ಯಮ ಉಲ್ಲೇಖಿಸಿ ಮಾಹಿತಿ ಹಂಚಿಕೊಂಡಿದೆ.


ಇರಾನ್ ಮತ್ತು ಅಮೆರಿಕ ನಿಯೋಗಗಳು ಮೊದಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವ ನಿರೀಕ್ಷೆಯಿದೆ. ಈ ಆರಂಭಿಕ ರಾಜತಾಂತ್ರಿಕ ಮಾತುಕತೆಗಳ ನಂತರ, ಪರೋಕ್ಷ ಮಾತುಕತೆಗಳ ಪ್ರಮುಖ ಸುತ್ತು ಪ್ರಾರಂಭವಾಗುವ ನಿರೀಕ್ಷೆಯಿದೆ.

ಬಿಗಿಭದ್ರತೆ
ಅಮೆರಿಕ ಮತ್ತು ಇರಾನ್ ನಡುವೆ ಕಳೆದ ೪೦ ದಿನಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಸಂಘರ್ಷವನ್ನು ಶಾಶ್ವತವಾಗಿ ಕೊನೆಗಾಣಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮದ್ಯಸ್ಥಿಕೆಯಲ್ಲಿ ಅಮೆರಿಕ- ಇರಾನ್ ನಡುವೆ “ಇಸ್ಲಮಾಬಾದ್ ಮಾತುಕತೆ” ಹಿನ್ನೆಲೆಯಲ್ಲಿ ಪೊಲೀಸರ ಭದ್ರಕೋಟೆ ನಿರ್ಮಾಣ ಮಾಡಲಾಗಿದೆ.


ಅಮೆರಿಕದ ನೇತೃತ್ವವನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ವಹಿಸಿದ್ದು ಹಿರಿಯ ಅಧಿಕಾರಿಗಳು ಮ್ತು ಪ್ರಮುಖರೊಂದಿಗೆ ಇಸ್ಲಮಾಬಾದ್‌ಗೆ ಆಗಮಿಸಿದ್ದಾರೆ. ಅದೇ ರೀತಿ ಇರಾನ್‌ನ ಸಂಸದೀಯ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ


ಈಗಾಲೇ ಅಮೆರಿಕ ಮತ್ತು ಇರಾನ್‌ನ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಉಭಯ ದೇಶಗಳ ಹಿರಿಯ ನಾಯಕರು ಇಸ್ಲಮಾಬಾದ್‌ಗೆ ಆಗಮಿಸಿದ್ದು ಮಾತುಕತೆ ನಡೆಯುವ ಸ್ಥಳದಿಂದ ಹಿಡಿದು, ಉಭಯ ದೇಶಗಳ ಪ್ರಮುಖರು ತಂಗಿರುವ ಹೋಟೆಲ್, ಸಂಚರಿಸುವ ಮಾರ್ಗಗಳೂ ಸೇರಿದಂತೆ ಎಲ್ಲೆಲ್ಲೂ ಪೊಲೀಸರ ಬಿಗಿ ಪಹರೆ ಹೆಚ್ಚಿಸಲಾಗಿದ್ದು ನಾಕಾಬಂಧಿ ಹಾಕಲಾಗಿದೆ.

ಯುದ್ಧ ಕೊನೆಗೊಳಿಸುವ ಗುರಿ


ಮಧ್ಯಪ್ರಾಚ್ಯ ಮತ್ತು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿದ ಆರು ವಾರಗಳ ಯುದ್ಧವನ್ನು ಕೊನೆಗೊಳಿಸುವ ಗುರಿಯೊಂದಿಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದ್ದು ಇರಾನ್‌ನೊಂದಿಗೆ ನಿರ್ಣಾಯಕ ಮಾತುಕತೆಗಳಿಗೆ ವೇದಿಕೆ ಸಿದ್ಧವಾಗಿದೆ
ನಿಯೋಗದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಸಲಹೆಗಾರ ಜೇರೆಡ್ ಕುಶ್ನರ್ ಸೇರಿದ್ದಾರೆ,

ಮಾಡು ಇಲ್ಲವೇ ಮಡಿ: ಪಾಕ್ ಪ್ರಧಾನಿ
ಅಮೆರಿಕ ಇರಾನ್ ನಡುವೆ ನಡೆದಿರುವ ಸಂಘರ್ಷ ಕೊನೆಗಾಣಿಸಲು ಮಾಡು ಇಲ್ಲವೆ ಮಡಿ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಪ್ ಹೇಳಿದ್ದಾರೆ.
ಸದ್ಯ ಎರಡು ವಾರಗಳ “ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ, ಆದರೆ ಈಗ ಇನ್ನೂ ಕಷ್ಟಕರವಾದ ಹಂತ ಮುಂದಿದೆ: ಶಾಶ್ವತ ಕದನ ವಿರಾಮ ಸಾಧಿಸುವ ಹಂತ, ಮಾತುಕತೆಗಳ ಮೂಲಕ ಸಂಕೀರ್ಣ ಸಮಸ್ಯೆ ಪರಿಹರಿಸುವುದು” ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.