
ಕಲಬುರಗಿ,ಫೆ. 4: ನರಿಬೋಳ ಚಾಮನೂರಿನ ಅಪೂರ್ಣ ಸೇತುವೆ ಕುರಿತ ಶಾಸಕ ಅಲ್ಲಮಪ್ರಭು ಪಾಟೀಲರು ಸದನದಲ್ಲಿ ಪ್ರಶ್ನೆ ಮಾಡಿದ್ದು ಸ್ವಾಗತ. ಆದರೆ ಕೇಳಬೇಕಾಗಿದ್ದಸಂದರ್ಭದಲ್ಲಿ ಕೇಳದೆ ಈಗ ಕೇಳಿದ್ದು ಯಕ್ಷ ಪ್ರಶ್ನೆಯಾಗಿದೆ ಗೊಂದಲಕ್ಕೆ ಈಡು ಮಾಡಿದೆ. ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಹೇಳಿದ್ದಾರೆ.
ಸೇತುವೆ ನಿರ್ಮಾಣ ಕುರಿತು ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ, ಅದರ ಕುರಿತು ಮಾತಾಡದವರು ಸೇತುವೆ ಕೊಚ್ಚಿಕೊಂಡು ಹೋಗಿರುವಾಗ ಮಾತಾಡದವರು ಈಗ ದುಡ್ಡು ಬಿಡುಗಡೆ ಆಗಿರುವಂತಹ ಸಂದರ್ಭದಲ್ಲಿ ಇನ್ನೇನು ಸೇತುವೆಗೆ ಹೊಸ ಟೆಂಡರ್ ಕರೆಯುವ ಪ್ರಯತ್ನದಲ್ಲಿ ಇರುವಾಗ ಶಾಸಕ ಅಲ್ಲಮಪ್ರಭು ಪಾಟೀಲರು ಪ್ರಶ್ನೆ ಮಾಡಿರುವುದು ಅನುಮಾನಕ್ಕೆ ಆಸ್ಪದವಾಗಿದೆ.
ಅದರಲ್ಲಿ ತಮ್ಮ ಸರ್ಕಾರವೆ ಇರುವಂತಹ ಸಂದರ್ಭದಲ್ಲಿ ಅಧಿಕಾರಿಗಳ ಮೂಲಕ ವಿಷಯ ತಿಳಿದುಕೊಂಡು ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹಿಸುವುದು ಬಿಟ್ಟು, ಸಾಮಾನ್ಯ ಜನ ಕೇಳುವಂತೆ ಪ್ರಶ್ನೆಯನ್ನು ಕೇಳಿರುವುದು ಅರ್ಥವಾಗುತ್ತಿಲ್ಲ. ಪ್ರಶ್ನೆ ಕೇಳಿದ್ದು ಸ್ವಾಗತವೆ. ಆದರೆ ಇದೆ ಪ್ರಶ್ನೆ ಹೋರಾಟ ನಡೆಯುವಂತಹ ಸಂದರ್ಭದಲ್ಲಿ ಅಥವಾ ಸೇತುವೆ ಕೊಚ್ಚಿಕೊಂಡು ಹೋದ ಸಂದರ್ಭದಲ್ಲಿ ಕೇಳದೆ ಈಗ ಕೇಳಿರುವುದು ಎರಡು ಗ್ರಾಮದ ಜನರು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಶಾಸಕರು ಈ ವಿಷಯ ಸ್ಪಷ್ಟಪಡಿಸಬೇಕು. ಪ್ರಶ್ನೆ ಕೇಳಿದ್ದು ಕೆ ಎಂ ವಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಪ್ರಯತ್ನಿಸಲೋ ? ಅಥವಾ ಅದೇ ಕಂಪನಿಗೆ ಮತ್ತೆ ಟೆಂಡರ್ ಕೊಡಿಸಲೋ ಎನ್ನುವುದು ಸ್ಷಷ್ಟವಾಗಬೇಕು. ಇಲ್ಲದಿದ್ದರೆ ಸೇತುವೆ ಕೆಲಸ ಪ್ರಾರಂಭವಾಗುವ ಸಂದರ್ಭ ಪ್ರಶ್ನೆ ಕೇಳಿ ನಾವು ಪ್ರಯತ್ನ ಮಾಡಿದ್ದೇವೆ ಎಂದು ತೋರಿಸುವ ತಂತ್ರವೆಂದೇ ಹೇಳಬೆಕಾಗುತ್ತದೆ.ಎಂತಹದೇ ಸಂದರ್ಭ ಬಂದರೂ ಕೆಎಂವಿ ಕಂಪನಿಯವರಿಂದ ಕೆಲಸ ಮಾಡಲು ಬಿಡುವುದಿಲ್ಲ. ಅವರೇನಾದರೂ ಟೆಂಡರನಲ್ಲಿ ಭಾಗವಹಿಸಿದರೆ ಅಂದಿನಿಂದಲೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹೋರಾಟ ಪ್ರಾರಂಭಿಸುತ್ತೇವೆ ಎಂದು ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.





















