
೪೭೩೨.೭೨ ಕೋಟಿ ಬಜೆಟ್
ಬೆಂಗಳೂರು.ಮಾ ೨೮- ಸ್ವಂತ ಆದಾಯ ಹೆಚ್ಚಿಸುವುದು, ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ಮುನ್ಸಿಪಲ್ ಬಾಂಡ್‌ಗಳ ಮೂಲಕ ಹೆಚ್ಚುವರಿ ಹಣ ಸಂಗ್ರಹಿಸುವ ಗುರಿಯೊಂದಿಗೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯು ೨೦೨೬-೨೭ನೇ ಸಾಲಿಗೆ ೪೭೩೨.೭೨ ಕೋಟಿ ಮೊತ್ತದ ಭರ್ಜರಿ ಬಜೆಟ್ ಮಂಡಿಸಿದೆ.
ಜಲಮಂಡಳಿ ಸುವರ್ಣಭವನದಲ್ಲಿ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಬಜೆಟ್ ಮಂಡಿಸಿ, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಂದಾಯ ವಿಭಾಗದಿಂದ ೧೯೬೪.೬೦ ಕೋಟಿ ಆದಾಯ ಗುರಿ ಇಡಲಾಗಿದ್ದು, ಅದರಲ್ಲಿ ೮೭೨ ಕೋಟಿ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸುವ ನಿರೀಕ್ಷೆಯಿದೆ.
ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಅಭಿಯಾನದಿಂದ ?೫೬೩ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಹೊಸ ಆಸ್ತಿ ನೋಂದಣಿ ಮತ್ತು ಇ-ದಾಖಲೆಗಳ ವ್ಯವಸ್ಥೆಯಿಂದ ಹೆಚ್ಚುವರಿ ಆದಾಯವೂ ಲಭಿಸುವ ನಿರೀಕ್ಷೆಯಿದೆ.
ಜಾಹೀರಾತು, ಸ್ಕೈವಾಕ್‌ಗಳಿಂದ ಆದಾಯ
ಹೊಸ ಜಾಹೀರಾತು ನೀತಿಯಡಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಅವಕಾಶ ನೀಡುವುದರಿಂದ ?೧೧೬ ಕೋಟಿ ಸಂಗ್ರಹಿಸುವ ಗುರಿ ಇಡಲಾಗಿದೆ. ಜೊತೆಗೆ ೫೦ ಸ್ಕೈವಾಕ್‌ಗಳ ಮೇಲೆ ಜಾಹೀರಾತು ಅಳವಡಿಕೆ ಮೂಲಕ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
ಮೂಲಸೌಕರ್ಯಕ್ಕೆ ಒತ್ತು:
ಭೂಸ್ವಾಧೀನ ಹಾಗೂ ಟಿಡಿಆರ್ ಕೋಶ ಸ್ಥಾಪನೆ, ಟಿಡಿಆರ್ ಎಕ್ಸ್ಚೇಂಜ್ ಸೆಲ್ ಆರಂಭಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ವೇಗ ನೀಡಲಾಗುತ್ತದೆ. ಇಟ್ಟುಮಡು, ಕುರುಬರಹಳ್ಳಿ, ಮಹಾಲಕ್ಷ್ಮೀಪುರಂ, ಹನುಮಂತನಗರ, ತ್ಯಾಗರಾಜನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಅಗಲೀಕರಣ ಕೈಗೊಳ್ಳಲಾಗುತ್ತದೆ.
ಘನತ್ಯಾಜ್ಯ ನಿರ್ವಹಣೆ
ತ್ಯಾಜ್ಯ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿಗೆ ೩೦೦ ಕೋಟಿ ಮೀಸಲು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ೧೦ ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಕಲ್ಯಾಣ ಯೋಜನೆಗಳಿಗೆ ೩೩೪.೯೯ ಕೋಟಿ
ಪರಿಶಿಷ್ಟಜಾತಿ/ಪಂಗಡ, ಹಿಂದುಳಿದ ವರ್ಗ, ಪೌರಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ವಿಶೇಷ ಚೇತನರಿಗೆ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ನೆರವು ನೀಡಲು ೩೩೪.೯೯ ಕೋಟಿ ಮೀಸಲು.
ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಲ್ಯಾಪ್‌ಟಾಪ್ ವಿತರಣೆ, ಮಹಿಳೆಯರಿಗೆ ಕೌಶಲ್ಯ ತರಬೇತಿ, ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆ.
ಹಸಿರೀಕರಣ ಮತ್ತು ಉದ್ಯಾನಗಳು
೪೯೬ ಉದ್ಯಾನವನಗಳ ನಿರ್ವಹಣೆಗೆ ೪೭.೪೫ ಕೋಟಿ ಮೀಸಲು. ನಗರದಲ್ಲಿ ೧೦೦ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರಮುಖ ಉದ್ಯಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿದೆ.
ಕೆರೆಗಳ ಅಭಿವೃದ್ಧಿ
೪೯ ಕೆರೆಗಳ ನಿರ್ವಹಣೆಗೆ ೧೩.೭೫ ಕೋಟಿ ಮೀಸಲು. ಯಡಿಯೂರು ಮತ್ತು ಚಿಕ್ಕಲ್ಲಸಂದ್ರ ಕೆರೆಗಳ ಪುನರುಜ್ಜೀವನಕ್ಕೆ ವಿಶೇಷ ಯೋಜನೆ ಕೈಗೊಳ್ಳಲಾಗಿದೆ.
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ
೫ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆ. ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ೨ ಕೋಟಿ ಮೀಸಲು.
ಶ್ರೀರಾಮಪುರ, ಆಜಾದ್‌ನಗರ ಸೇರಿದಂತೆ ಹಲವು ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ೯೫ ಕೋಟಿ ಮೀಸಲು. ವರ್ಚುವಲ್ ಕ್ಲಿನಿಕ್ ಸೇವೆಗಳ ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ.
ಮುನ್ಸಿಪಲ್ ಬಾಂಡ್ ೨೨೬ ಕೋಟಿ ಸಂಪನ್ಮೂಲ
೨೦೦ ಕೋಟಿ ಮುನ್ಸಿಪಲ್ ಬಾಂಡ್ ಹೊರಡಿಸುವ ಯೋಜನೆ ರೂಪಿಸಲಾಗಿದ್ದು, ಕೇಂದ್ರದಿಂದ ೨೬ ಕೋಟಿ ಪ್ರೋತ್ಸಾಹಧನ ನಿರೀಕ್ಷಿಸಲಾಗಿದೆ. ಒಟ್ಟು ೨೨೬ ಕೋಟಿ ಬಂಡವಾಳ ಕಾಮಗಾರಿಗಳಿಗೆ ಬಳಸಲಾಗುತ್ತದೆ.
ಪ್ರಮುಖ ಕಾಮಗಾರಿಗಳು
ಹಂಪಿನಗರದಲ್ಲಿ ಕೆಂಪೇಗೌಡ ಭವನ ೨೫ ಕೋಟಿ
ಕುಂಬಳಗೂಡು ವಿದ್ಯುತ್ ಚಿತಾಗಾರದಲ್ಲಿ ಸೋಲಾರ್ ೧೦ ಕೋಟಿ
ಪಾಲಿಕೆ ಕಟ್ಟಡಗಳಲ್ಲಿ ರೂಫ್ಟಾಪ್ ಸೋಲಾರ್ ೨ ಕೋಟಿ
ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ಅನುದಾನ
ಒಟ್ಟಾರೆ, ಮೂಲಸೌಕರ್ಯ, ಪರಿಸರ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಸಮತೋಲನ ಒತ್ತು ನೀಡುವ ಮೂಲಕ ಪಶ್ಚಿಮ ಪಾಲಿಕೆಯ ಬಜೆಟ್ ಅಭಿವೃದ್ಧಿಮುಖಿ ಆಗಿದೆ.






























